ಶಿರಸಿ: ತಾಲೂಕಿನ ಬಿಸಲಕೊಪ್ಪದ ಸೂರ್ಯನಾರಾಯಣ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಧ್ವಜಾರೋಹಣ ನಂತರ ನಡೆದ ಸಮಾರಂಭದಲ್ಲಿ 40ಕ್ಕೂ ಹೆಚ್ಚು ಅರ್ಹ ವಿದ್ಯಾರ್ಥಿಗಳಿಗೆ ವಿವಿಧ ಮಹನೀಯರು ಇರಿಸಿದ ದತ್ತಿನಿಧಿಯನ್ನು ವಿತರಿಸಲಾಯಿತು. ಅತಿಥಿಗಳಾಗಿ ಸಂಸ್ಥೆಯ ಕಾರ್ಯದರ್ಶಿ ಶ್ರೀಧರ ನಾಯಕ ಭಾಗವಹಿಸಿ ಮಾತನಾಡುತ್ತ ಭಾರತದ ಇತಿಹಾಸ, ಸಂಸ್ಕೃತಿ ಅರಿತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಬಗೆ ಹೆಮ್ಮೆಪಡಿ ಹಾಗೂ ಆಜಾದಿ ಕಾ ಅಮೃತ ಮಹೋತ್ಸವ ಸಂದರ್ಭದಲ್ಲಿ ದೇಶಪ್ರೇಮದ ಅಮೃತ ಹೀರುವ ಮಕ್ಕಳಾಗಿ ಎಂದರು. ದತ್ತಿನಿಧಿ ಇಟ್ಟವರಲ್ಲಿ ಒಬ್ಬರಾದ ಆರ್.ವಿ.ಹೆಗಡೆ ಬಿಸಲಕೊಪ್ಪ ಮಾತನಾಡಿ ವಿದ್ಯಾರ್ಥಿಗಳು ದೊರೆತ ಹಣವನ್ನು ಅಭ್ಯಾಸಕ್ಕಾಗಿ ಉಪಯೋಗಿಸಿ ಹಾಗೂ ಮುಂದೆ ಮಕ್ಕಳೂ ದತ್ತಿನಿಧಿ ಇಟ್ಟು ಪ್ರೋತ್ಸಾಹಿಸುವಂತೆ ಆಗಲಿ ಎಂದರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷರಾದ ಎಸ್ಎಂ ಹೆಗಡೆ ಹುಡೇಲಕೊಪ್ಪ ಮಾತನಾಡಿ ಶಿಕ್ಷಣದ ಜೊತೆ ಶಿಸ್ತು, ಸಮರ್ಪಣಾ ಭಾವ, ದೇಶಪ್ರೇಮ ,ಕೋಮು ಸೌಹಾರ್ದತೆ ಹೊಂದಿ ಬಾಳಿ ಎಂದರು. ಮುಖ್ಯೋಪಾಧ್ಯಾಯರಾದ ಗಣೇಶ ಭಟ್ಟ ವಾನಳ್ಳಿ ಪ್ರಾರಂಭದಲ್ಲಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಗಣೇಶ ಸಾಯಿಮನೆ ವಂದಿಸಿದರೆ ಶಿಕ್ಷಕ ಪ್ರಸಾದ ಹೆಗಡೆ ನಿರ್ವಹಿಸಿದರು.ಮಕ್ಕಳಿಂದ ಭಾಷಣ, ದೇಶ ಭಕ್ತಿಗೀತೆ ಕಾರ್ಯಕ್ರಮ ನಡೆಯಿತು.