ಅಂಕೋಲಾ: ಇಲ್ಲಿನ ಬೆಳೆಗಾರರ ಸಮಿತಿಯು ಒಂದು ವಿನೂತನ ಮತ್ತು ರಾಷ್ಟ್ರ ಪ್ರೇಮದ ಕಾರ್ಯಕ್ರಮವೊಂದನ್ನು ಪ್ರಾರಂಭ ಮಾಡಿದ್ದಾರೆ. ಅಂಕೋಲೆಯಲ್ಲಿ ಸುಮಾರು 430 ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಗಳಿದ್ದು, ಬಹುತೇಕ ಸ್ವಾತಂತ್ರ್ಯ ಹೋರಾಟಗಾರರು ದಿವಂಗತರಾಗಿದ್ದಾರೆ. ಅಂಕೋಲೆಯಲ್ಲಿ ಈಗ ಬದುಕುಳಿದ ಸ್ವಾತಂತ್ರ್ಯ ಹೋರಾಟಗಾರೆಂದರೆ ಸೂರ್ವೆಯ ವೆಂಕಣ್ಣ ನಾಯಕರು. ಸ್ವಾತಂತ್ರ್ಯ ಹೋರಾಟಕ್ಕೆ ಅಂಕೋಲೆಯ ಹೋರಾಟಗಾರರ ಕೊಡುಗೆ ಒಂದೆರಡಲ್ಲ. ಪಟ್ಟ ಕಷ್ಟಗಳು ನೂರಾರು.
ಸ್ವಾತಂತ್ರ್ಯ ಸೇನಾನಿಗಳು ಜೈಲು ವಾಸ ಅನುಭವಿಸಿದ್ದರಿಂದ ಅವರಷ್ಟೇ ತೊಂದರೆಗೆ ಒಳಗಾಗಿದ್ದಲ್ಲ, ಅವರ ಹೆಂಡತಿ, ಮಕ್ಕಳು, ಮೊಮ್ಮಕ್ಕಳು, ಅಣ್ಣ- ತಮ್ಮಂದಿರು ಸಹ ತೊಂದರೆಗೆ ಒಳಗಾದರು. ಉಪವಾಸ ಹೊಂದಿ ತುತ್ತು ಅನ್ನಕ್ಕೂ ಸಹ ಕಷ್ಟ ನಷ್ಟ ಅನುಭವಿಸಿದರು. ಹೋರಾಟಗಾರ ಜಮೀನು ಪೋರ್ಫಿಟ್ ಆದ್ದರಿಂದಲೂ ಸಹ ಕುಟುಂಬದ ಸದಸ್ಯರು ವಿಪರೀತ ತೊಂದರೆಗೆ ಒಳಗಾದರು. ಸ್ವಾತಂತ್ರ್ಯ ಹೋರಾಟಗಾರರು ಮರೆಯಾದ ನಂತರ ಅವರ ಕುಟುಂಬದವರು ಅವಜ್ಞೆಗೆ ಒಳಗಾದರು. ಹೋರಾಟಗಾರರು ಗತಿಸಿದ ನಂತರ ಅವರ ಕುಟುಂಬದ ತ್ಯಾಗ ಹೇಗೆ ಮರೆಯಲು ಸಾಧ್ಯ. ಆದ್ದರಿಂದ ಬೆಳೆಗಾರರ ಸಮಿತಿ, ಅಂಕೋಲೆಯ ಪ್ರತಿಯೊಂದು ಹೋರಾಟಗಾರರ ಮನೆಗೆ ಭೇಟಿ ನೀಡಿ ಅವರಲ್ಲಿ ಹಿರಿಯ ವ್ಯಕ್ತಿಗಳನ್ನು ಹೋರಾಟಗಾರರ ಪರವಾಗಿ ಸನ್ಮಾನ ಮಾಡಿ ಬರುವ ಉದ್ದೇಶ ಇಟ್ಟುಕೊಂಡು ಹೊರಟಿದ್ದು, ಆ ಪ್ರಯುಕ್ತ ಕರನಿರಾಕರಣೆಯ ಚಳುವಳಿಯ ಕುರಿತು ನಡೆದ ಪ್ರಥಮ ಸಭೆ ನಡೆದ ಕಳಸದ ಮನೆ ಇರುವ ಸ್ಥಳದಲ್ಲಿ ಇಂದು ಗಿಡ ನೆಡುವ ಮುಖಾಂತರ ಕಾರ್ಯಕ್ರಮ ಉದ್ಘಾಟಿಸಲಾಯಿತು. ಆ ನಂತರ ಸ್ವಾತಂತ್ರ್ಯ ಯೋಧ ಸೂರ್ವೇಯ ವೆಂಕಣ್ಣ ನಾಯಕರ ಮನೆಗೆ ತೆರಳಿ ಸನ್ಮಾನಿಸಿ ರಕ್ತ ಚಂದನ ಗಿಡ ಅರ್ಪಿಸಲಾಯಿತು.
ನಂತರ ಹಡವ ಗ್ರಾಮಕ್ಕೆ ತೆರಳಿ ಹಡವ ಗ್ರಾಮದ ಸ್ವಾತಂತ್ರ್ಯ ಹೋರಾಟಗಾರರಾದ ದಿ.ಬೊಮ್ಮ ಜುಂಜಾ ಗೌಡ, ದಿ.ಪೊಕ್ಕ ಗೌಡ, ದಿ.ಕರಿಯಾ ಗೌಡ, ದಿ.ರಾಮ ಗೌಡ, ದಿ.ಬೊಮ್ಮ ಗೌಡ, ದಿ.ಗೋವಿಂದ ಜಂಗ ಗೌಡ, ಗೋವಿಂದ ಗೌಡ, ದಿ.ಸೋಮು ಗೌಡ ಅವರ ಕುಟುಂಬದ ಸದಸ್ಯರಿಗೆ ಹಡವ ದೇವಸ್ಥಾನದ ಬಳಿ ಕರೆದು ಸನ್ಮಾನಿಸಲಾಯಿತು. ದೇಶದ ಸ್ವಾತಂತ್ರ್ಯಕ್ಕೆ ಕೊಡುಗೆ ನೀಡಿದ ಹೋರಾಟಗಾರ ಕುಟುಂಬದ ತ್ಯಾಗಕ್ಕೆ ಧನ್ಯವಾದ ತಿಳಿಸಲಾಯಿತು. ಬೆಳೆಗಾರರ ಸಮಿತಿಯ ಈ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ. ಈ ಒಂದು ವರ್ಷದ ಒಳಗೆ ಅಂಕೋಲೆಯ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರ ಮನೆಗೆ ತೆರಳಿ ಗಿಡ ನೀಡಿ ಆ ಕುಟುಂಬದ ಹಿರಿಯ ಸದಸ್ಯರನ್ನು ಗೌರವಿಸುವ ಧ್ಯೇಯ ಬೆಳೆಗಾರರ ಸಮಿತಿ ಅಂಕೋಲೆ ಹೊಂದಿದೆ.