ಸಿದ್ದಾಪುರ: ತೋಟಗಾರಿಕೆ ಹಾಗೂ ಕೃಷಿ ಇಲಾಖೆಯಲ್ಲಿ ರೈತರಿಗೆ ಅನುಕೂಲವಾಗುವ ಹಲವು ಯೋಜನೆಗಳು ಇದ್ದು ಅದರ ಪ್ರಯೋಜನವನ್ನು ರೈತರು ಪಡೆದುಕೊಳ್ಳಬೇಕಾದರೆ ಇಲಾಖೆಗಳೊಂದಿಗೆ ಸಂಪರ್ಕದಲ್ಲಿರಬೇಕು ಎಂದು ಹಾರ್ಸಿಕಟ್ಟಾ ಅಘನಾಶಿನಿ ಸಾಂಬಾರು ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಶಂಕರನಾರಾಯಣ ಹೆಗಡೆ ಕುಂಬಾರಕುಳಿ ಹೇಳಿದರು.
ತಾಲೂಕಿನ ಹಾರ್ಸಿಕಟ್ಟಾ ಅಘನಾಶಿನಿ ಸಾಂಬಾರ ಬೆಳೆಗಳ ರೈತ ಉತ್ಪಾದಕ ಕಂಪನಿಯಲ್ಲಿ ತೋಟಗಾರಿಕೆ ಪಿತಾಮಹ ಡಾ.ಎಂ.ಎಚ್. ಮರಿಗೌಡರ್ ಅವರ ಜನ್ಮದಿನಾಚರಣೆ ಅಂಗವಾಗಿ ತೋಟಗಾರಿಕಾ ಇಲಾಖೆಯಸಹಕಾರದಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣ ಮತ್ತು ರೈತರೊಂದಿಗೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಸೋಮವಾರ ಮಾತನಾಡಿದರು. ರೈತರಿಗೆ ಮಾಹಿತಿಯ ಕೊರತೆ ಆಗಬಾರದು. ಸರ್ಕಾರದ ಯೋಜನೆಗಳು ಸದುಪಯೋಗ ಆಗಬೇಕು ಎಂದು ಹೇಳಿದರು.
ಹಾರ್ಸಿಕಟ್ಟಾ ಗ್ರಾಪಂ ಅಧ್ಯಕ್ಷೆ ವಿದ್ಯಾ ಪ್ರಕಾಶ ನಾಯ್ಕ ಅಧ್ಯಕ್ಷತೆವಹಿಸಿದ್ದರು. ಉಪಾಧ್ಯಕ್ಷ ಶಾಂತಕುಮಾರ ಎಸ್.ಪಾಟೀಲ್, ಸದಸ್ಯರಾದ ಗೋಪಾಲಕೃಷ್ಣ ಗಾಳೀಜಡ್ಡಿ, ಸೀತಾರಾಮ ಶೇಟ್ ಇತರರಿದ್ದರು.
ಡಾ.ಪ್ರೀತಮ್ ಎಸ್.ಪಿ, ತಾಲೂಕು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಎಚ್.ಜಿ.ಅರುಣ, ತೋಟಗಾರಿಕಾ ಅಧಿಕಾರಿ ಮಹಾಬಲೇಶ್ವರ ಬಿ.ಎಸ್. ತೋಟಗಾರಿಕಾ ಇಲಾಖೆಯಿಂದ ಸಿಗಬಹುದಾದ ಸೌಲಭ್ಯಗಳ ಹಾಗೂ ಪುಷ್ಪಕೃಷಿ ಕುರಿತು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಪ್ರಗತಿಪರ ಕೃಷಿಕರಾದ ಸತ್ಯನಾರಾಯಣ ಟಿ ಹೆಗಡೆ ಹಾಗೂ ಮಹಾಬಲೇಶ್ವರ ಎಸ್.ಹೆಗಡೆ ಅವರನ್ನು ಸನ್ಮಾನಿಸಲಾಯಿತು.
ನಂತರ ರೈತರೊಂದಿಗೆ ಸಂವಾದ ಹಾಗೂ ತಾಲೂಕಿನ ವಿವಿಧ ರೈತ ಉತ್ಪಾದಕ ಕಂಪನಿಯ ವ್ಯವಸ್ಥಾಪಕರು ಮತ್ತು ಸದಸ್ಯರೊಂದಿಗೆ ಚರ್ಚೆ ನಡೆಯಿತು. ಎಚ್.ಜಿ.ಅರುಣ, ಮಹಾಬಲೇಶ್ವರ ಬಿ.ಎಸ್, ಕಾಶೀನಾಥ ಪಾಟೀಲ್, ಲೋಕೇಶ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.