ಭಟ್ಕಳ: ತಾಲೂಕು ಗಾಣಿಗ ಸೇವಾ ಸಂಘ, ಶ್ರೀ ಗೋಪಾಲಕೃಷ್ಣ ಪತ್ತಿನ ಸಹಕಾರಿ ಸಂಘ ನಿಯಮಿತ ಹಾಗೂ ಮುಗಳಿಕೋಣೆ ಶ್ರೀಗೋಪಾಲಕೃಷ್ಣ ದೇವಸ್ಥಾನ ಆಡಳಿತ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಆ.18ರ ಮಧ್ಯಾಹ್ನ 2ಕ್ಕೆ ಶ್ರೀಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಆರು ವರ್ಷದೊಳಗಿನ ಮಕ್ಕಳಿಗಾಗಿ ಮುದ್ದು ರಾಧೆ, ಮುದ್ದು ಕೃಷ್ಣ ಸ್ಪರ್ಧೆಯನ್ನು ಶ್ರೀಗೋಪಾಲಕೃಷ್ಣ ದೇವಸ್ಥಾನದ ಸಭಾಭವನದಲ್ಲಿ ಏರ್ಪಡಿಸಲಾಗಿದೆ ಎಂದು ತಾಲೂಕು ಗಾಣಿಗ ಸೇವಾ ಸಂಘದ ಅಧ್ಯಕ್ಷ ಸುಭಾಶ ಶೆಟ್ಟಿ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಪರ್ಧೆಯ ಪ್ರತಿಯೊಂದು ವಿಭಾಗದಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ಹಾಗೂ ಆಕರ್ಷಕ ಫಲಕ ಮತ್ತು ಪ್ರಶಸ್ತಿ ಪತ್ರವನ್ನು ನೀಡಲಾಗುವುದು. ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಅಭಿನಂದನಾ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಲಾಗುವುದು. ಭಟ್ಕಳ ತಾಲೂಕಿನ ಎಲ್ಲಾ ಸಮಾಜದ ಬಂಧುಗಳು ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಬೇಕೆಂದು ವಿನಂತಿಸಿದರು.
ಕಾರ್ಯಕ್ರಮದ ಸಂಯೋಜಕ ಪ್ರಕಾಶ ಶಿರಾಲಿ ಮಾತನಾಡಿ, ಶ್ರೀ ಕೃಷ್ಣ ಜನ್ಮೋತ್ಸವದ ಪ್ರಯುಕ್ತ ದಿ ನ್ಯೂ ಇಂಗ್ಲೀಷ್ ಕಾಲೇಜಿನ ವಿದ್ಯಾರ್ಥಿಗಳಿಂದ ಶ್ರೀಕೃಷ್ಣ ರೂಪಕ, ಭಗವದ್ಗೀತೆ ಪಠಣ, ಭಜನೆ ಕಾರ್ಯಕ್ರಮವನ್ನು ಆಯೋಜಿಸಿಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಾಳುಗಳಿಗೆ ಸ್ಥಳದಲ್ಲಿಯೇ ಫೋಟೋ ಬೇಕಾದಲ್ಲಿ ಪಡೆಯಲು ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀಗೋಪಾಲಕೃಷ್ಣ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ನಾರಾಯಣ ಶೆಟ್ಟಿ, ಉಪಾಧ್ಯಕ್ಷ ಗಜಾನನ ಶೆಟ್ಟಿ, ರಾಧಾ ಶೆಟ್ಟಿ, ರಾಜೇಶ್ ಶೆಟ್ಟಿ, ಮನೋಜ್ ಶೆಟ್ಟಿ, ಕಿರಣ ಶೆಟ್ಟಿ ಹಾಗೂ ಗಾಣಿಗ ಸಮಾಜದ ಸದಸ್ಯರು ಹಾಜರಿದ್ದರು.