ಹೊನ್ನಾವರ: ವಿಪರೀತ ಗಾಳಿ- ಮಳೆಗೆ ರೈತರೊಬ್ಬರ 50ಕ್ಕೂ ಹೆಚ್ಚು ಅಡಿಕೆ, ತೆಂಗು, ಬಾಳೆ, ಜಾಯಿಕಾಯಿ ಗಿಡಗಳು ನೆಲಕ್ಕುರುಳಿ ಲಕ್ಷಾಂತರ ರೂ. ಹಾನಿಯಾಗಿರುವ ಘಟನೆ ನವಿಲಗೋಣ ಗ್ರಾ.ಪಂ ವ್ಯಾಪ್ತಿಯ ಬೆಂತ್ಲಕೇರಿಯಲ್ಲಿ ಗುರುವಾರ ರಾತ್ರಿ ನಡೆದಿದೆ.
ನವಿಲಗೋಣ ಬೆಂತ್ಲಕೇರಿಯ ಪರಮೇಶ್ವರ ನಾಯ್ಕ ಎಂಬುವವರ ನೂರಾರು ಫಲಭರಿತ ಅಡಿಕೆ ಮರಗಳು ಗಾಳಿಯ ರಭಸಕ್ಕೆ ನೆಲಕ್ಕುರುಳಿದೆ. ಹತ್ತಕ್ಕೂ ಹೆಚ್ಚು ತೆಂಗಿನ ಮರಗಳು, ಜಾಯಿಕಾಯಿ ಹಾಗೂ ಬಾಳೆ ಗಿಡಗಳು ನೆಲಸಮಗೊಂಡು ರೈತ ಕಂಗಾಲಾಗಿದ್ದಾನೆ. ಗುರುವಾರ ರಾತ್ರಿ ಏಕಾಏಕಿ ಚಂಡಮಾರುತದತೆ ಬೀಸಿದ ಗಾಳಿ ರೈತನ ಬದುಕನ್ನೆ ಕಸಿದುಕೊಂಡಿದೆ. ಅಡಿಕೆ ಬೆಳೆಯನ್ನೆ ನಂಬಿ ಜೀವನ ಸಾಗಿಸುತ್ತಿದ್ದ ರೈತ ಪರಮೇಶ್ವರ ಅವರಿಗೆ ಗಾಳಿಯ ಅವಾಂತರ ಬರಸಿಡಿಲಿನಂತೆ ಬಂದೆರಗಿದಂತಾಗಿದೆ. ಮಕ್ಕಳಂತೆ ಸಾಕಿ ಬೆಳೆಸಿದ ಫಲಭರಿತ ಅಡಿಕೆ, ತೆಂಗು ಬೆಳೆಗಳು ನಾಶವಾಗಿರುವುದಕ್ಕೆ ರೈತ ಕುಟುಂಬ ಈಗ ಕಂಗಾಲಾಗಿದೆ.
ನೂರಾರು ಅಡಿಕೆ ಮರಗಳು ಬುಡ ಸಮೇತ ಕಿತ್ತುಬಿದ್ದರೆ, ಇನ್ನೂ ಅನೇಕ ಮರಗಳು ಮಧ್ಯಭಾಗದಲ್ಲೇ ಮುರಿದು ಹಾನಿಯಾಗಿದೆ. ಅನೇಕ ತೆಂಗಿನ ಮರಗಳು ಬುಡಮೇಲಾಗಿ ಧರೆಗುರುಳಿದೆ. ಸಾವಿರಾರು ಜಾಯಿಕಾಯಿ ಬಿಡುವ ಮರಗಳು ಕಿತ್ತುಬಿದ್ದು ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ನವಿಲಗೋಣ ಭಾಗದ ಇನ್ನೂ ಕೆಲವೆಡೆ ಸಣ್ಣಪುಟ್ಟ ಮರಗಳು ಧರಗುರುಳಿವೆ. ಕಂದಾಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಹಾನಿ ವರದಿ ಪರಿಶೀಲನೆ ನಡೆಸಿದ್ದಾರೆ.