ಯಲ್ಲಾಪುರ: ಯಲ್ಲಾಪುರ ಹೆಸ್ಕಾಂ ಸಿಬ್ಬಂದಿ ಸೈನಿಕರಂತೆ ಕೆಲಸ ಮಾಡಿ ಗುರುವಾರ ಪಟ್ಟಣಕ್ಕೆ ವಿದ್ಯುತ್ ಸಂಪರ್ಕವನ್ನು ಒದಗಿಸಿದ್ದಾರೆ.
ಮಳೆ ಗಾಳಿ ಬಿಸಿಲಿನಲ್ಲಿ ದೇಶವನ್ನು ರಕ್ಷಿಸುವ ಸೈನಿಕರು ದೇಶ ಹಾಗೂ ದೇಶದ ಜನತೆಗೆ ಪ್ರಾಣವನ್ನು ಕಾಪಾಡುತ್ತಾರೆ. ಅದೇ ರೀತಿಯಲ್ಲಿ ಯಲ್ಲಾಪುರ ಉಪವಿಭಾಗದ ಹೆಸ್ಕಾಂ ಸಿಬ್ಬಂದಿ ಹಾಗೂ ಅಧಿಕಾರಿಗಳು 3 ಕಡೆಗಳಲ್ಲಿ ಮರ ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡ ಹಿನ್ನೆಲೆಯಲ್ಲಿ ಮಳೆ ಗಾಳಿಯನ್ನು ಲೆಕ್ಕಿಸದೆ ತಮ್ಮ ಪ್ರಾಣವನ್ನು ಪಣವಾಗಿಟ್ಟು ಪಟ್ಟಣಕ್ಕೆ ವಿದ್ಯುತ್ ಸಂಪರ್ಕ ನೀಡಲು ಶ್ರಮಿಸಿದ್ದಾರೆ.
ಗುರುವಾರ ಮಧ್ಯಾಹ್ನ 2.30ರ ಸುಮಾರಿಗೆ ಪಟ್ಟಣ ವ್ಯಾಪ್ತಿಯಲ್ಲಿ ವಿದ್ಯುತ್ ಕಡಿತಗೊಂಡಿತ್ತು ಇದಕ್ಕೆ ಕಾರಣ ಕಿರವತ್ತಿಯಿಂದ ಯಲ್ಲಾಪುರಕ್ಕೆ ಸಂಪರ್ಕಿಸುವ 33ಕೆವಿ ವಿದ್ಯುತ್ ತಂತಿಯ ಮೇಲೆ ಹಳಿಯಾಳ ಕ್ರಾಸ್ ಗೆ ಮಿಲನ್ ಹೊಟೇಲ್ ಸಮೀಪದ ಅರಣ್ಯದಲ್ಲಿ ಹಾಗೂ ಸಮೀಪದ ಕೊಂಡೆಮನೆಯ ಎರಡೂ ಕಡೆಗಳಲ್ಲಿ ಬೃಹತ್ ಗಾತ್ರದ ಮರಗಳು ತಂತಿ ಕಂಬದ ಮೇಲೆ ಉರುಳಿ ಬಿದ್ದಿದ್ದವು. ಗುರುವಾರ ಬೆಳಿಗ್ಗೆಯಿಂದ ಸಂಜೆಯವರೆಗೂ ಭಾರೀ ಗಾಳಿ ಬೀಸುತ್ತಿದ್ದು ಯಾವುದೇ ಕ್ಷಣಕ್ಕೂ ಮರಗಳು ತಂತಿಯ ಮೇಲೆ ಉರುಳಿ ಬೀಳುವ ಸಾಧ್ಯತೆಗಳೂ ಇದ್ದವು. ಕಿರವತ್ತಿಯಿಂದ ಹಾದು ಬಂದ ವಿದ್ಯುತ್ ತಂತಿಯ ಮೇಲೆ 3ಕಡೆ ಮರ ಹಾಗೂ ಮರದ ಟೊಂಗೆಗಳು ಉರುಳಿ ಬಿದ್ದ ಪರಿಣಾಮ ವಿದ್ಯುತ್ ಸಂಪರ್ಕ ನೀಡುವ ತಂತಿಗಳು ನೆಲಕ್ಕಪ್ಪಳಿಸಿದವು. ಕೂಡಲೇ 2-3ತಂಡಗಳಲ್ಲಿ ಕಾರ್ಯಪ್ರವೃತ್ತರಾದ ಹೆಸ್ಕಾಂ ಉಪವಿಭಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ರಾತ್ರಿ 9ಗಂಟೆಗೆ ಮಳೆ ಹಾಗೂ ಗಾಳಿಯ ಮಧ್ಯೆ ಕೆಲಸ ಮಾಡಿ ವಿದ್ಯುತ್ ಸಂಪರ್ಕ ನೀಡಲು ಯಶಸ್ವಿಯಾಗಿದ್ದಾರೆ.
ಕೆಲ ಸಮಯದ ನಂತರ ವಿದ್ಯುತ್ ಸಂಪರ್ಕ ಮತ್ತೆ ಕಡಿತಗೊಂಡಿದ್ದು ನಂತರ ಗುಳ್ಳಾಪುರ ಲೈನ್ ನಿಂದ ಸಂಪರ್ಕ್ ನೀಡಿ ಮಧ್ಯರಾತ್ರಿ ಸುಮಾರು 12ಗಂಟೆಯವರೆಗೆ ಕೆಲಸ ಮಾಡಿ ಪರಿಪೂರ್ಣವಾಗಿ ಪಟ್ಟಣಕ್ಕೆ ವಿದ್ಯುತ್ ಸಂಪರ್ಕ ಒದಗಿಸಿದ್ದಾರೆ. ವಾರ-ಹತ್ತು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಪಟ್ಟಣ ಹಾಗೂ ಕೆಲ ಗ್ರಾಮೀಣ ವ್ಯಾಪ್ತಿಯಲ್ಲಿ ಯಾವುದೇ ಅಡಚಣೆ ಇಲ್ಲದೆ ಹೆಸ್ಕಾಂನವರು ವಿದ್ಯುತ್ ಪೂರೈಸಿದ್ದು ಮಧ್ಯ ಮಧ್ಯದಲ್ಲಿ ತಾಂತ್ರಿಕ ತೊಂದರೆಯಿಂದ ವಿದ್ಯುತ್ ಕಡಿತಗೊಳ್ಳುತ್ತಿತ್ತು. ಇಂತಹ ಸಂದರ್ಭದಲ್ಲಿ ಬಹಳಷ್ಟು ಜನ ಹೆಸ್ಕಾಂನವರಿಗೆ ಶಾಪ ಹಾಕಿದ್ದು ಇದೆ. ಆದರೆ, ಮರಗಿಡಗಳಿಂದ ಸುತ್ತುವರೆದ ಪ್ರದೇಶವಾಗಿರುವ ಯಲ್ಲಾಪುರ ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುವ ಹೆಸ್ಕಾಂ ಸಿಬ್ಬಂದಿಗಳ ಕಾರ್ಯಗಳ ಒಳಹೊರವನ್ನು ಸಮೀಪದಿಂದ ಬಲ್ಲವರಿಗೆ ಮಾತ್ರ ಅವರ ಸೇವೆ ಮತ್ತು ಕರ್ತವ್ಯಪ್ರಜ್ಞೆ ಅರಿವಾಗುತ್ತಿತ್ತು. ಹಲವಾರು ಜನ ಗುರುವಾರದ ಸೈನಿಕರನ್ನು ಹೋಲಿಸಿ ಮಾತನಾಡಿದ್ದಾರೆ.
ಹೆಸ್ಕಾಂ ಅಧಿಕಾರಿ ಸುನಿಲ್ ವಿ.ಕೆ. ನೇತೃತ್ವದಲ್ಲಿ ಸಿಬ್ಬಂದಿ ಶೇಖರ್, ಕನಕಪ್ಪ, ಉಮೇಶಪ್ಪ, ಕೃಷ್ಣಪ್ಪ, ವಿವೇಕ, ಉತ್ತಪ್ಪ ಹಾಗೂ ಇನ್ನಿತರರು ಕಾರ್ಯಾಚರಣೆ ನಡೆಸಿ ವಿದ್ಯುತ್ ಸಂಪರ್ಕ ನೀಡಿದ್ದರು.
ಸೈನಿಕರಂತೆ ಕೆಲಸ ಮಾಡಿ ವಿದ್ಯುತ್ ಸಂಪರ್ಕ ನೀಡಿದ ಹೆಸ್ಕಾಂ ಸಿಬ್ಬಂದಿ
