ಶಿರಸಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ವಿದ್ಯಾರ್ಥಿಗಳೇ ಸಿದ್ಧಪಡಿಸಿದ್ದ ಭೂ ನಿಗಾವಣೆ ಉಪಗ್ರಹ(ಇಓಎಸ್-02) ವನ್ನು ಶ್ರೀಹರಿಕೋಟಾದ ಧವನ್ ಬಾಹ್ಯಾಕಾಶ ಸಂಸ್ಥೆಯಿಂದ ಸಣ್ಣ ಉಪಗ್ರಹ ವಾಹಕ ವಾಹನ(ಎಸ್.ಎಸ್ ಎಲ್ವಿ-ಡಿ1)ದಲ್ಲಿ ಕಕ್ಷೆಗೆ ಸೇರಿಸುವ ಕಾರ್ಯಕ್ರಮ ವೀಕ್ಷಿಸಲು ಶಿರಸಿಯ ‘ಆಗಸ್ 360’ ತಂಡವು ಇಸ್ರೋ ನೀಡಿದ ಅವಕಾಶದ ಮೇರೆಗೆ ತೆರಳಿ ಪಾಲ್ಗೊಂಡಿತ್ತು.
ಆಕಾಶ ವೀಕ್ಷಣೆ, ಬಾಹ್ಯಾಕಾಶ ಚಟುವಟಿಕೆಗಳಲ್ಲಿ ತೀವ್ರ ಆಸಕ್ತಿ, . ಉತ್ಸಾಹದಿಂದ ಕಾರ್ಯ ಮಾಡುತ್ತ ಗಮನಸೆಳೆದಿರುವ ‘ಆಗಸ್ 360’ ತಂಡಕ್ಕೆ ಇಸ್ರೋ ಪ್ರವೇಶ ಪತ್ರ ನೀಡಿ ಎಂಟು ಜನರು ಪಾಲ್ಗೊಳ್ಳಲು ಅವಕಾಶ ನೀಡಿತ್ತು. ಈ ತಂಡದ, ಕೇರಳ ಪೆರಿಯೆ ಸೆಂಟ್ರಲ್ ಯೂನಿವರ್ಸಿಟಿಯ ಭೌತ ವಿಜ್ಞಾನದ ವಿದ್ಯಾರ್ಥಿ ವಿಭವ ಮಂಗಳೂರ, ಭೈರುಂಬೆ ಶ್ರೀ ಶಾರದಾಂಬಾ ಆಂಗ್ಲಮಾಧ್ಯಮ ಪ್ರೌಢಶಾಲೆಯ ಮುಖ್ಯಾಧ್ಯಾಪಕ ವಸಂತ ಹೆಗಡೆ ನೇತೃತ್ವದಲ್ಲಿ ಭೈರುಂಬೆ ಮತ್ತು ಎಂಜಿಸಿಎಂ ಬಿದ್ರಕಾನ್ ಶಾಲೆಯ ಆಯ್ದ ವಿದ್ಯಾರ್ಥಿಗಳು, ವಿಭವ ಅವರ ಸಹಪಾಠಿ ಹರ್ಷ ಜೋಶಿ ಆಂಧ್ರ ಪ್ರದೇಶದ ಶ್ರೀಹರಿಕೋಟಾಕ್ಕೆ ತೆರಳಿ ಸೆಟಲೈಟ್ ಉಡಾವಣೆಯ ರೋಮಾಂಚಕ ಪ್ರತ್ಯಕ್ಷ ಕ್ಷಣಗಳನ್ನು ಅನುಭವಿಸಿದರು. ವಿಜ್ಞಾನದ ಪ್ರಚಾರದಲ್ಲಿ, ಆಸಕ್ತಿ ಮೂಡಿಸುತ್ತಿರುವ ‘ಆಗಸ್ 360’ ತಂಡವು ಇಸ್ರೋ ಕರೆಯ ಪ್ರಯೋಜನ ಪಡೆಯಿತು.
ಕೋಟ್..
ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಮ್ಮ ಆಗಸ್ 360ಗೆ ಅವಕಾಶ ಸಿಕ್ಕಿದ್ದು ಸಂತೋಷದ, ಹೆಮ್ಮೆಯ ಸಂಗತಿ, ಉಪಗ್ರಹ ಉಡಾವಣೆಯ ಲೈವ್ ಪ್ರೋಗ್ರಾಮ್ ತುಂಬ ಖುಷಿ ನೀಡಿತು. ಹೆಚ್ಚಿನ ವಿಷಯ ತಿಳಿದುಕೊಳ್ಳಲು ಪ್ರೇರಣೆಯಾಯಿತು. ಈ ಸಂದರ್ಭದಲ್ಲಿ ಸೆಲ್ಕೋ ಸಿಇಒ ಮೋಹನ ಹೆಗಡೆ ಹಾಗೂ ಬಿವಿಟಿ ಮಣಿಪಾಲ ಇವರು ನೀಡಿದ ಪ್ರೋತ್ಸಾಹವನ್ನು ನೆನಪಿಸಿಕೊಳ್ಳುತ್ತೇನೆ. ಮುಂದಿನ ವರ್ಷ ನಾವೇ ನಮ್ಮ ಯುನಿವರ್ಸಿಟಿಯಿಂದ ನ್ಯಾನೋ ಉಪಗ್ರಹ ತಯಾರಿಸಿ ಪಾಲ್ಗೊಳ್ಳುವ ಗುರಿ ಹೊಂದಿದ್ದೇವೆ.— ವಿಭವ ಮಂಗಳೂರ
ನಮಗೆ ಮತ್ತು ನಮ್ಮ ಜತೆಗಿದ್ದ ವಿದ್ಯಾರ್ಥಿಗಳಿಗೆ ಉಪಗ್ರಹ ಉಡಾವಣೆಯ ವೀಕ್ಷಣೆ ಹಾಗೂ ಅಲ್ಲಿನ ಸ್ಪೇಸ್ ಮ್ಯೂಸಿಯಂ ನೋಡುವ, ವಿಜ್ಞಾನಿಗಳೊಂದಿಗೆ ಚರ್ಚಿಸುವ ಅವಕಾಶ ಲಭಿಸಿದ್ದು ನಮ್ಮ ಜೀವಮಾನದ ರೋಮಾಂಚಕ ಸಮಯವಾಗಿತ್ತು–ವಸಂತ ಹೆಗಡೆ