• Slide
    Slide
    Slide
    previous arrow
    next arrow
  • ವರ್ತಮಾನದಲ್ಲಿ ನಿಲ್ಲುವ ಅಭ್ಯಾಸ ಮಾಡಿದವನಿಗೆ ಉದ್ವೇಗ ಇಲ್ಲ: ಸ್ವರ್ಣವಲ್ಲೀ ಶ್ರೀ

    300x250 AD

    ಶಿರಸಿ: ಯಾವ ವ್ಯಕ್ತಿ ವರ್ತಮಾನದಲ್ಲಿ ನಿಲ್ಲುವ ಅಭ್ಯಾಸ ಮಾಡುವನೋ ಅವನಿಗೆ ಉದ್ವೇಗ ಇರುವದಿಲ್ಲ ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಸಲಹೆ ನೀಡಿದರು.

    ಅವರು ಸ್ವರ್ಣವಲ್ಲೀ ಮಠದಲ್ಲಿ ತಮ್ಮ 32ನೇ ಚಾತುರ್ಮಾಸ್ಯ ವೃತದ ಸಂದರ್ಭದಲ್ಲಿ ಕಿಸಲವಾಡ ಸೀಮೆಯ ಶಿಷ್ಯರು, ಭಕ್ತರಿಂದ ಸೇವೆ ಸ್ವೀಕರಿಸಿ ಆಶೀರ್ವಚನ ನುಡಿದರು.

    ಇವತ್ತಿನ ಒಂದು ಸಮಸ್ಯೆ ಎಂದರೆ ಉದ್ವೇಗ. ಇದು ಅನೇಕ ಸಮಸ್ಯೆ ನಿರ್ಮಾಣ ಮಾಡಿದೆ. ಆರೋಗ್ಯದ ಮೇಲೂ ಸಮಸ್ಯೆ ಮಾಡಿದೆ. ಬಹುತೇಕ ಪ್ರತಿಯೊಬ್ಬನಿಗೂ ಮೂರರಲ್ಲಿ ಒಂದು ಖಾಯಿಲೆ ಇರುತ್ತದೆ. ಮಧುಮೇಹ, ರಕ್ತದೊತ್ತಡ, ಹೃದಯದ ಸಂಬಂಧದ ಕಾಯಿಲೆ ಇರುತ್ತವೆ. ಅಷ್ಟರ ಮಟ್ಟಿಗೆ ಈ ಉದ್ವೇಗ ಸಮಾಜದಲ್ಲಿ ಸಮಸ್ಯೆ ಆಗಿ ಬೆಳೆಯುತ್ತಿದೆ. ಇದನ್ನು ಕಡಿಮೆ ಮಾಡಲು ಕೆಲವು ಉಪಾಯಗಳು ಇವೆ. ಅವುಗಳಲ್ಲಿ ಒಂದು ಉಪಾಯ ಎಂದರೆ ಅದು ವರ್ತಮಾನ ಕಾಲದಲ್ಲಿ ನಿಲ್ಲುವದು ಎಂದರು.

    ವರ್ತಮಾನ ಕಾಲದಲ್ಲಿ ಯಾವ ಕೆಲಸದಲ್ಲಿ ತೊಡಗಿದ್ದೇವೋ ಆ ಕೆಲಸದಲ್ಲಿ ನಾವು ನೂರಕ್ಕೆ ನೂರು ತೊಡಗಿಕೊಳ್ಳಬೇಕು. ಆ ಕಾಲದಲ್ಲಿ ಯಾವ ಕೆಲಸ ತೆಗೆದುಕೊಳ್ಳುತ್ತೇವೋ, ಆ ಕೆಲಸದಲ್ಲಿ ಮನಃಸ್ಪೂರ್ತಿಯಾಗಿ ಇರಬೇಕು. ಚಿಂತೆ, ಉದ್ವೇಗ ಬಿಟ್ಟು ತೊಡಗಿಕೊಳ್ಳಬೇಕು. ಚಿಂತೆ, ಉದ್ವೇಗ ಇದ್ದರೆ ಸಮಸ್ಯೆಗಳು ಸೃಷ್ಟಿ ಆಗುತ್ತವೆ ಎಂದ ಶ್ರೀಗಳು, ಉದ್ವೇಗಗಳಿಗೆ ಕಾರಣ ಅನಗತ್ಯವಾಗಿ ಹಿಂದಿನ ನೆನಪು ಹಾಗೂ ಮುಂದಿನ ಆಲೋಚನೆ ಮಾಡುವದು ಕಾರಣವಾಗಿದೆ. ಇದನ್ನು ಪ್ರಯೋಗ ಕೂಡ ಮಾಡಿ ನೋಡಬಹುದು. ಯಾವ ಕೆಲಸ ಮಾಡುವದಿದ್ದರೂ ಮಾಡಿ ಮುಗಿಯುವ ತನಕ ಅದೇ ಕೆಲಸ ಮಾಡಬೇಕು ಎಂದೂ ಹೇಳಿದರು.

    ವರ್ತಮಾನ ಕಾಲದಲ್ಲಿ ಮನಸ್ಸು ಇಡುವದರಿಂದ ಆ ಕೆಲಸವೂ ಚೆನ್ನಾಗಿ ಆಗುತ್ತದೆ. ಯಾವುದೇ ಕೆಲಸ ಮಾಡುವದನ್ನು ಮನಸ್ಸಿಟ್ಟು ಮಾಡಿದರೆ ಆ ಕೆಲಸ ಚೆನ್ನಾಗಿ ಆಗುತ್ತದೆ. ಅರ್ಧ ಮನಸ್ಸಿನಿಂದ ಮಾಡಿದರೆ ಆ ಕೆಲಸ ಅಪೂರ್ಣ ಆಗುತ್ತದೆ. ಹಿಂದೆ ಹಾಗೂ ಮುಂದಿನದ್ದು ನೆನಸಿಕೊಳ್ಳದೇ ಹೋದರೆ ಮನಸ್ಸು ಹಗುರವಾಗಿ ಇರುತ್ತದೆ. ಮಾಡಿದ ಕೆಲಸ ಅಂದರೆ ಕರ್ಮ ಯೋಗ ಒಳ್ಳೆಯದಾಗುತ್ತದೆ. ಕರ್ಮದಲ್ಲಿ ನಿಪುಣತೆಯೇ ಕರ್ಮ ಯೋಗ ಎಂದೂ ಹೇಳಿದರು.

    300x250 AD

    ಕರ್ಮವು ಕರ್ಮ ಯೋಗ ಆಗಬೇಕಾದರೆ ಕೆಲಸದ ಮೇಲಿನ ಶ್ರದ್ಧೆ ಇಡಬೇಕು ಹಾಗೂ ಅದರ ಫಲದ ಬಗ್ಗೆ ಚಿಂತೆ ಮಾಡಬಾರದು. ಬೇಸರ ಮಾಡಿಕೊಳ್ಳದೇ ಕಾಯಕ ಮಾಡಬೇಕು. ಇದರಿಂದ ಮಾನಸಿಕ ಆರೋಗ್ಯ ಕೂಡ ಚೆನ್ನಾಗಿರುತ್ತದೆ. ಕೆಲಸವೂ ಬೇಗ ಮುಗಿಯುತ್ತದೆ.  ಮನಸ್ಸಿನ ಉದ್ವೇಗ ಕಳೆದುಕೊಳ್ಳಲು ಒಳ್ಳೆಯ ಉಪಾಯ ಇದು ಎಂದು ಡಿವಿಜಿ ಅವರ ಮಾತನ್ನು ಉಲ್ಲೇಖಿಸಿ ಮಾತನಾಡಿದ ಶ್ರೀಗಳು,  ದೇವರಲ್ಲಿ ಭಕ್ತಿ ಇದ್ದವನು ದೇವರ ಧ್ಯಾನದಲ್ಲಿ ಚಿಂತೆ, ಉದ್ವೇಗ ಕಳೆದುಕೊಳ್ಳುತ್ತಾನೆ. ಆದರೆ, ಆಗಲೂ ಬೇರೆ ಚಿಂತನೆ ಮಾಡುವವರು ಇದ್ದಾರೆ. ಬೇರೆ ಚಿಂತನೆ ಮಾಡಿದರೆ ಮನಸ್ಸು ಏಕಾಗಗ್ರತೆ ಆಗದು. ಈ ಕಾರಣಕ್ಕೆ ಗೀತೆಯಲ್ಲೂ ಭಗವಂತ ಕರ್ಮಯೋಗದ ನಂತರ ಧ್ಯಾನ ಅಥವಾ ಜ್ಞಾನ ಯೋಗ ಹೇಳಿದ್ದಾನೆ ಎಂದೂ ತಿಳಿಸಿದರು.

    ಸೀಮೆಯ ಅಧ್ಯಕ್ಷ ವಿಶ್ವನಾಥ ಹೆಗಡೆ ಅತ್ತಿಸರ, ಪ್ರಮುಖರಾದ ಪ್ರಶಾಂತ ಭಟ್ಟ ಬೆಣ್ಣೇಗದ್ದೆ, ಗಣಪತಿ ಭಟ್ಟ ಮಣದೂರು, ಎಂ.ಎನ್.ಭಟ್ಟ ಸಂಪೇಕಟ್ಟು, ವಾರಿಜಾ ಹೆಗಡೆ ಇತರರು ಇದ್ದರು.

    ಮಣದೂರು ಭಾಗದ ಭಕ್ತರು ಸಲ್ಲಿಸಿದ ಕೇಜಿಗೂ ಅಧಿಕ ಭಾರದ ತುಳಸೀ ಮಾಲೆಯನ್ನು ಸ್ವರ್ಣವಲ್ಲೀ ಗುರುಗಳು ಧರಿಸಿ ಹರಸಿದರು. ಹತ್ತು ಸಹಸ್ರಕ್ಕೂ ಅಧಿಕ ತುಳಸಿ ಕುಡಿಯಿಂದ ಮಾಡಿದ ಈ ಮಾಲೆ ಹಲವು ಕರಗಳಿಂದ ಸಿದ್ಧವಾಗಿತ್ತು ಎಂಬುದು ಉಲ್ಲೇಖನೀಯ.

    Share This
    300x250 AD
    300x250 AD
    300x250 AD
    Leaderboard Ad
    Back to top