ಜೊಯಿಡಾ: ನಿವೃತ್ತಿ ಹೊಂದಿದ ಪಿಎಲ್‌ಡಿ ಬ್ಯಾಂಕ್ ಜಗಲಬೇಟ ಶಾಖೆಯ ವ್ಯವಸ್ಥಾಪಕ ಗಣಪತಿ ಮರಾಠೆ ಅವರಿಗೆ ಬ್ಯಾಂಕ್ ಆಡಳಿತ ಕಮಿಟಿ ಹಾಗೂ ಬ್ಯಾಂಕ್ ವತಿಯಿಂದ ಗೌರವ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ರಾಮಕೃಷ್ಣ ದಾನಗೇರಿ, ತಾಲೂಕು ಬಹುಪಾಲು ಅರಣ್ಯದಿಂದ ಕೂಡಿದ ಪ್ರದೇಶ. ಇಲ್ಲಿನ ರೈತರು ಬೆಳೆ ಬೆಳೆದರು ಕಾಡುಪ್ರಾಣಿಗಳ ಕಾಟ ಮತ್ತು ಬೆಳೆಗೆ ಸರಿಯಾದ ಮಾರುಕಟ್ಟೆ ಇಲ್ಲದ ಕಾರಣ ರೈತ ಸಮಸ್ಯೆ ಹೊಂದಿದ್ದಾನೆ. ಆದರೂ ಇಲ್ಲಿನ ಪಿಎಲ್‌ಡಿ ಬ್ಯಾಂಕ್‌ನ ವ್ಯವಸ್ಥಾಪಕ ಗಣಪತಿ ಮರಾಠೆಯವರು ರೈತನ ನೋವನ್ನು ಅರಿತು ಸಾಲಗಳನ್ನು ನೀಡಿ, ಉತ್ತಮವಾಗಿ ವಸೂಲಾತಿಯನ್ನು ಮಾಡಿದ್ದಾರೆ. ಜಿಲ್ಲೆಯಲ್ಲಿಯೇ ನಮ್ಮ ಬ್ಯಾಂಕ್ ಎರಡನೇ ಸ್ಥಾನದಲ್ಲಿದೆ. ಇದಕ್ಕೆ ಗಣಪತಿ ಮರಾಠೆಯವರ ಶ್ರಮ ಬಹಳಷ್ಟಿದೆ ಎಂದರು.
ನಂದಿಗದ್ದಾ ಗ್ರಾ.ಪಂ ಉಪಾಧ್ಯಕ್ಷ ಅರುಣ ದೇಸಾಯಿ ಮಾತನಾಡಿ, ಒಬ್ಬ ಸಾಮಾನ್ಯ ಸಿಬ್ಬಂದಿಯಾಗಿ ಕೆಲಸಕ್ಕೆ ಸೇರಿಕೊಂಡ ಗಣಪತಿ ಮರಾಠೆ ತಮ್ಮ ಉತ್ತಮ ಸೇವೆಯ ಮೂಲಕ ಬ್ಯಾಂಕ್‌ನ ಉನ್ನತಿಗೆ ಕಾರಣರಾಗಿದ್ದಾರೆ. ಯಾವುದೇ ಕಪ್ಪು ಚುಕ್ಕೆ ಇಲ್ಲದೆ ತಮ್ಮ ಅವಧಿಯಲ್ಲಿ ಕೆಲಸ ನಿರ್ವಹಿಸಿದ್ದಾರೆ. ತಾಲೂಕಿನ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದ್ದಾರೆ. ತಾಲೂಕಿನ ರೈತರಿಗೆ ಇಲ್ಲಿಯ ಪಿಎಲ್‌ಡಿ ಬ್ಯಾಂಕ್ ಜೀವನಾಡಿಯಾಗಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಗಣಪತಿ ಮರಾಠೆ, ನಾನು ನನ್ನ ಕೈಲಾದ ಕೆಲಸವನ್ನು ನನ್ನ ಅವಧಿಯಲ್ಲಿ ಮಾಡಿದ್ದೇನೆ. ಬ್ಯಾಂಕ್‌ನ ನಿರ್ದೇಶನದಂತೆ ಕೆಲಸ ಮಾಡಿದ್ದೇನೆ. ನಮ್ಮ ಸೇವೆಗೆ ನೀವು ನೀಡಿದ ಸನ್ಮಾನ ಅವಿಸ್ಮರಣೀಯ ಎಂದರು.
ಈ ಸಂದರ್ಭದಲ್ಲಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಆನಂದ ಪೊಕಳೆ, ಆದರ್ಶ ಸೇವಾ ಸೇವಾ ಸಹಕಾರಿ ಸಂಘದ ಅಧ್ಯಕ್ಷ, ದಿಲೀಪ್ ಗಾಂಜೆಕರ್, ಶಿರಸಿ ಪಿಎಲ್‌ಡಿ ಜಿಲ್ಲಾ ವ್ಯವಸ್ಥಾಪಕರಾದ ಶ್ವೇತಾ ದೇವರಾಜ್, ಜಿ.ಪಿ.ಮಿರಾಶಿ, ಶ್ರೀಧರ ಹೆಗಡೆ ಇತರರು ಇದ್ದರು.