ಯಲ್ಲಾಪುರ : ಯಲ್ಲಾಪುರ ಪಟ್ಟಣದಲ್ಲಿ ಮಾನ್ಯ ಸಚಿವ ಶಿವರಾಮ ಹೆಬ್ಬಾರರ ಪ್ರಯತ್ನದ ಫಲವಾಗಿ ಸುಮಾರು ಆರೂವರೆ ಕೋಟಿ ₹ ವೆಚ್ಚದಲ್ಲಿ ಬೃಹತ್ ಬಸ್ ನಿಲ್ದಾಣ ಅಸ್ತಿತ್ವಕ್ಕೆ ಬಂದಿದ್ದರೂ ಇದರಲ್ಲಿ ಪುಸ್ತಕ ಮಳಿಗೆ ಸ್ಥಾಪನೆಗೆ ಸಾರಿಗೆ ನಿಗಮದ ಅಧಿಕಾರಿಗಳು ಹಿಂದೇಟು ಹಾಕುತ್ತಿರುವದರ ವಿರುದ್ಧ ಬೃಹತ್ ಪ್ರತಿಭಟನೆ ಕೈಗೊಳ್ಳಲಾಗುವದು ಎಂದು ಮಾತೃಭೂಮಿ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಶ್ರೀರಂಗ ಕಟ್ಟಿ ಎಚ್ಚರಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಎರಡು ಸಲ ಸಚಿವ ಹೆಬ್ಬಾರ ಮತ್ತು ವಾಯವ್ಯ ಕರ್ನಾಟಕ ಸಾರಿಗೆ ನಿಗಮದ ಅಧ್ಯಕ್ಷ ವಿ.ಎಸ್.ಪಾಟೀಲ್, ಹಿರಿಯ ಅಧಿಕಾರಿಗಳಿಗೆ ಪುಸ್ತಕ ಮಳಿಗೆ ಸ್ಥಾಪನೆಗೆ ದೂರವಾಣಿ ಮೂಲಕ ಆದೇಶಿಸಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ. ಸಚಿವರು ಮತ್ತು ಅಧ್ಯಕ್ಷರ ಆದೇಶವನ್ನು ಗಾಳಿಗೆ ತೂರಿದ ಅಧಿಕಾರಿಗಳು ಕನ್ನಡ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ಶ್ರೀರಂಗ ಕಟ್ಟಿ ಆಪಾದಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲ ಬಸ್ ನಿಲ್ದಾಣಗಳಲ್ಲೂ ಪುಸ್ತಕ ಮಳಿಗೆಗಳಿದ್ದು ಅಲ್ಲಿ ಕನ್ನಡ ಪತ್ರಿಕೆ ಮತ್ತು ಪುಸ್ತಕ ಮಾರಾಟದ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ಈ ಮಲತಾಯಿ ಧೋರಣೆ ಕಂಡುಬಂದಿದ್ದು ಅಧಿಕಾರಿಗಳ ಬೇಜವಾಬ್ದಾರಿ ನಿಲುವೇ ಇದಕ್ಕೆ ಕಾರಣ ಎಂದು ಟೀಕಿಸಿದರು. ಪುಸ್ತಕ ಮಳಿಗೆ ಸ್ಥಾಪನೆಗೆ ವಾಣಿಜ್ಯೇತರ ದರವನ್ನು ನಿಗದಿಪಡಿಸಿ ತಕ್ಷಣ ಟೆಂಡರ್ ಕರೆಯಬೇಕೆಂದು ಅವರು ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಪ.ಪಂ.ಸದಸ್ಯ ಸೋಮು ನಾಯ್ಕ, ಹಳೆಯ ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಮತ್ತು ಸೆಕ್ಯೂರಿಟಿ ಗಾರ್ಡ ವ್ಯವಸ್ಥೆ ಇತ್ತು. ಆದರೆ ಈಗ ಈ ಬೃಹತ್ ನಿಲ್ದಾಣ ಸೂಕ್ತ ನಿರ್ವಹಣೆಯಿಲ್ಲದೆ ಕಸದ ತೊಟ್ಟಿಯಂತಾಗಿದೆ. ಅಲ್ಲದೇ ಚೌಡೇಶ್ವರಿ ದೇವಸ್ಥಾನದ ಎದುರು ಬಸ್ ನಿಲ್ದಾಣಕ್ಕೆ ಹೊಗಲು ನಿರ್ಮಿಸಲಾಗಿರುವ ಕಾಲುದಾರಿಯ ಮೇಲೆ ಬಸ್ ನಿಲುಗಡೆ ಮಾಡುತ್ತಿದ್ದು ಇದರಿಂದ ಹಿರಿಯ ನಾಗರಿಕರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಓಡಾಡಲು ರಸ್ತೆಯೇ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾತೃಭೂಮಿ ಸೇವಾ ಪ್ರತಿಷ್ಠಾನದ ಹೋರಾಟಕ್ಕೆ ಕರ್ನಾಟಕ ಜರ್ನಾಲಿಸ್ಟ ಅಸೋಸಿಯೇಶನ್ ಮತ್ತು ಕಾರ್ಯನಿರತ ಪತ್ರಕರ್ತ ಸಂಘಗಳು ಬೆಂಬಲ ಸೂಚಿಸಿದ್ದು ಮುಂಬರುವ ದಿನಗಳಲ್ಲಿ ವಿವಿಧ ಸಂಘಟನೆಗಳು ಸಹ ಹೋರಾಟಕ್ಕೆ ಕೈ ಜೋಡಿಸಲಿವೆ. ಅಗಸ್ಟ ೫ನೇ ತಾರೀಕಿನ ಒಳಗಾಗಿ ಬಸ್ ನಿಲ್ದಾಣದಲ್ಲಿ ಪುಸ್ತಕ ಮಳಿಗೆ ಸ್ಥಾಪನೆ ಮತ್ತು ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿರುವ ಶ್ರೀರಂಗ ಕಟ್ಟಿ, ಇದಕ್ಕೆ ತಪ್ಪಿದಲ್ಲಿ ಯಲ್ಲಾಪುರ ಜನತೆಯ ಸಹಕಾರದೊಂದಿಗೆ ಬಸ್ ನಿಲ್ದಾಣ ಮುತ್ತಿಗೆ, ಬಸ್ ತಡೆ ಮುಂತಾದ ಉಗ್ರ ಹೋರಾಟಕ್ಕೆ ಮುಂದಾಗಬೇಕಾದೀತು ಎಂದು ಎಚ್ಚರಿಕೆ ನೀಡಿದ್ದಾರೆ. ಸಾಮಾಜಿಕ ಕಾರ್ಯಕರ್ತ ಮಂಜುನಾಥ ಹಿರೇಮಠ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು