ಶಿರಸಿ: ಕಸ್ತೂರಿ ರಂಗನ್ ವರದಿ ಆಧಾರಿತ ಪರಿಸರ ಸೂಕ್ಷ್ಮ ಪ್ರದೇಶ ಘೋಷಣೆಯ ಐದನೇ ಕರಡು ಅಧಿಸೂಚನೆ ರದ್ದುಗೊಳಿಸಬೇಕೆಂದು ಆಗ್ರಹಿಸಿ ಶಿರಸಿಯಲ್ಲಿ ಜು. 30 ಶನಿವಾರದಂದು ಬೃಹತ್ ರ‍್ಯಾಲಿ ಸಂಘಟಿಸಲು ತೀರ್ಮಾನಿಸಲಾಗಿದೆ.
ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಅಧ್ಯಕ್ಷತೆಯಲ್ಲಿ ಇಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಕಾರ್ಯಾಲಯದಲ್ಲಿ ಜರುಗಿದ ‘ಕಸ್ತೂರಿ ರಂಗನ್ ವರದಿ- ಚಿಂತನ ಸಭೆ’ಯಲ್ಲಿ ತೀರ್ಮಾನಿಸಲಾಯಿತು.
ಕರಡು ಅಧಿಸೂಚನೆಯಂತೆ ಪರಿಸರ ಅತೀ ಸೂಕ್ಷ್ಮ ಪ್ರದೇಶ ನಿಗದಿಗೊಳಿಸುವ ಅಂಶವು ಜನಜೀವನದ ವ್ಯವಸ್ಥೆ ಮೇಲೆ ಪರಿಣಾಮ ಬೀರುವುದರಿಂದ, ವರದಿ ಅನುಷ್ಠಾನದ ಪೂರ್ವದಲ್ಲಿ ಘೋಷಿಸಿದ ಸೂಕ್ಷ್ಮ ಪ್ರದೇಶ ವ್ಯಾಪ್ತಿಯ ಗ್ರಾಮ ಮಟ್ಟದ ಜನಾಭಿಪ್ರಾಯ ಸಂಗ್ರಹದ ವರದಿಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಬೇಕೆಂದು ಮುಖ್ಯಮಂತ್ರಿಗಳಿಗೆ ಅಗ್ರಹಿಸಲು ಸಭೆಯಲ್ಲಿ ತಿರ್ಮಾನಿಸಲಾಯಿತು.
ಘೋಷಿತ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯಲ್ಲಿ ರಾಸಾಯನಿಕ ಸಿಂಪಡನೆ ಇಲ್ಲದ ಕೃಷಿ, ಪ್ರವಾಸೋದ್ಯಮ ಅಭಿವೃದ್ಧಿ, ಕಟ್ಟಡ ಮತ್ತು ಟೌನ್‌ಶಿಫ್ ನಿರ್ಮಾಣಕ್ಕೆ ನಿರ್ಬಂಧನ, ಅರಣ್ಯವಾಸಿಗಳ ಅರಣ್ಯ ಹಕ್ಕಿನಿಂದ ವಂಚನೆ, ರಸ್ತೆ ನಿರ್ಮಾಣ, ವಿದ್ಯುತ್ ಸಂಪರ್ಕ, ಬೊರವೆಲ್ ಮುಂತಾದ ಚಟುವಟಿಕೆಗೆ ನಿರ್ಬಂಧನೆಗಳಿರುವುದರಿಂದ ಮಲೆನಾಡನ ಸಹಜ ಜೀವನ ವ್ಯವಸ್ಥೆ ಮೇಲೆ ಮಾರಕವಾಗುವುದರಿಂದ ಸೂಕ್ಷ್ಮ ಪ್ರದೇಶದ ಪ್ರತಿ ಕುಟುಂಬದಿಂದಲೂ ಆಕ್ಷೇಪಣೆ ಸಲ್ಲಿಸಲು ತಿರ್ಮಾನಿಸಲಾಯಿತು.
ಜಿಲ್ಲಾದ್ಯಂತ ಪ್ರತಿಭಟನೆ ಮತ್ತು ರ‍್ಯಾಲಿ : ಉತ್ತರ ಕನ್ನಡ ಜಿಲ್ಲೆಯ 6998 ಚ.ಕೀ.ಮೀ ಪ್ರದೇಶದಲ್ಲಿನ, 9 ತಾಲೂಕುಗಳಿಂದ 704 ಹಳ್ಳಿಗಳು ಸೇರ್ಪಡೆಯಾಗಿರುವ ಪರಿಸರ ಸೂಕ್ಷ್ಮ ಪ್ರದೇಶ ಘೋಷಣೆಯಿಂದ ಜಿಲ್ಲೆಯ ಜನತೆಯ ಮೇಲೆ ಉಂಟಾಗುವ ವ್ಯತಿರಿಕ್ತವಾದ ಪರಿಣಾಮವನ್ನ ಸರಕಾರದ ಗಮನ ಸೆಳೆಯುವ ಉದ್ದೇಶದಿಂದ ಜಿಲ್ಲಾದ್ಯಂತ ಪ್ರತಿಭಟನೆ ಮತ್ತು ರ‍್ಯಾಲಿ ಸಂಘಟಿಸಲು ತೀರ್ಮಾನಿಸಲಾಗಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.
ಲಕ್ಷ್ಮಣ ಮಾಳ್ಳಕ್ಕನವರ, ದೇವರಾಜ ಮರಾಠಿ, ನೆಹರೂ ನಾಯ್ಕ ಬಿಳೂರು, ಎಮ್ ಆರ್ ನಾಯ್ಕ ಕಂಡ್ರಾಜಿ, ಉದಯ ನಾಯ್ಕ, ರಾಜು ನರೇಬೈಲ್. ಎಮ್ ಕೆ ನಾಯ್ಕ ಕಂಡ್ರಾಜಿ, ಜೈ ಪ್ರಕಾಶ ಹಬ್ಬು, ಇಬ್ರಾಹಿಂ ಗೌಡಳ್ಳಿ ಚರ್ಚೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು. ದುಗ್ಗು ಮರಾಠಿ, ರಾಮ ಪೂಜಾರಿ, ಬೆಳ್ಳಪ್ಪ ಗೌಡ್ರು, ಶಿವು ಗೌಡ್ರು, ಸುರೇಶ ನಾಯ್ಕ, ಅನಂತ ಮಾಸ್ತ್ಯ ನಾಯ್ಕ, ಗೋವಿಂದ ಮಂಜಪ್ಪ ಗೌಡ, ನಾರಾಯಣ ಸರ್ವಾ ಗೌಡ ಮುಂತಾದವರು ಉಪಸ್ಥಿತರಿದ್ದರು.