ಭಟ್ಕಳ: ಜಿಲ್ಲೆಯ ಸುಪ್ರಸಿದ್ಧ ಜಾತ್ರೆಯಲ್ಲಿ ಒಂದಾದ ಪಟ್ಟಣದ ಮಾರಿ ಜಾತ್ರೆ ಈ ವರ್ಷ ಅದ್ಧೂರಿಯಾಗಿ ನಡೆಯಲಿದ್ದು, ಜುಲೈ 26, 27 ಮತ್ತು 28ರಂದು ಸಂಪ್ರದಾಯಬದ್ಧವಾಗಿ ಜರುಗಲಿದೆ ಎಂದು ಮಾರಿಕಾಂಬಾ ದೇವಸ್ಥಾನ ಆಡಳಿತ ಕಮಿಟಿಯ ಅಧ್ಯಕ್ಷ ಪರಮೇಶ್ವರ ನಾಯ್ಕ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜಾತ್ರೋತ್ಸವದ ಮಾಹಿತಿ ನೀಡಿದ ಅವರು, ಕಳೆದ ಎರಡು ವರ್ಷ ಜಾತ್ರೆಗೆ ಕೋವಿಡ್ ಅಡ್ಡಿಯಾಗಿತ್ತು. ದೇವರ ದರ್ಶನದಿಂದ ಪೂಜೆ, ಹಣ್ಣು- ಕಾಯಿಗೆ ನಿಗದಿತ ಜನರನ್ನೊಳಗೊಂಡಂತೆ ಸರಳವಾಗಿ ಕಾರ್ಯಕ್ರಮಗಳು ಜರುಗಿದ್ದವು. ಇದರಿಂದ ಭಕ್ತರಿಗೂ ಸಹ ಮಾರಿ ಹಬ್ಬದ ಸಂಭ್ರಮ ಕಳೆಗುಂದಿತ್ತು. ಆದರೆ ಈ ವರ್ಷ ಕೋವಿಡ್ ಅಡೆತಡೆ ಯಾವುದೂ ಇಲ್ಲದೇ ಅದ್ಧೂರಿಯಾಗಿ ಭಕ್ತರ ಪ್ರವೇಶಕ್ಕೆ ಯಾವುದೇ ನಿಗದಿತ ಸಂಖ್ಯೆ ನಿರ್ಬಂಧ ಇಲ್ಲದೇ ನಡೆಯಲಿದೆ ಎಂದರು.
ಈಗಾಗಲೇ ಮಾರಿ ಮೂರ್ತಿ ತಯಾರಿಕೆಯ ಸಿದ್ಧತೆಗಳು ನಡೆದಿವೆ. ಶುಕ್ರವಾರ ಸ್ಥಳದಿಂದ ಮಾರಿ ಮೂರ್ತಿ ತಯಾರಿಕಾ ಸ್ಥಳವಾದ ಆಚಾರ್ಯ ಕುಟುಂಬದ ಮಾರಿ ಗದ್ದುಗೆಗೆ ಕರೆತರಲಾಗುವುದು. ಜುಲೈ 26ರ ಒಳಗೆ ಮಾರಿ ಮೂರ್ತಿ ಕೆತ್ತನೆ ಕಾರ್ಯ ಪೂರ್ಣಗೊಂಡು, ಅದೇ ದಿನ ರಾತ್ರಿ ನಡೆಯಲಿರುವ ಸುಹಾಸಿನಿ ಪೂಜೆ ನಡೆಯಲಿದೆ. 27ರ ಮುಂಜಾನೆ ಮಾರಿಕಾಂಬಾ ದೇವಸ್ಥಾನದ ಗದ್ದುಗೆಗೆ ಮಾರಿ ಮೂರ್ತಿಯನ್ನು ಮೆರವಣಿಗೆ ಮೂಲಕ ಕರೆ ತಂದು ಪೂಜೆಸಲಿದ್ದೇವೆ. 28ರಂದು ಮಧ್ಯಾಹ್ನದ ವೇಳೆ ಮಾರಿ ದೇವಿಗೆ ವಿಸರ್ಜನಾ ಪೂಜೆ ನೆರವೇರಿಸಿ, ಭಕ್ತರು ತಲೆಯ ಮೇಲೆ ದೇವಿ ಮೂರ್ತಿಯನ್ನು ಹೊತ್ತು ಜಾಲಿಕೋಡಿ ಸಮುದ್ರಕ್ಕೆ ಮರವಣಿಗೆಯಲ್ಲಿ ಕೊಂಡೊಯ್ದು ವಿಸರ್ಜನೆ ಮಾಡಲಿದ್ದಾರೆ ಎಂದರು.
ಕಮಿಟಿಯ ಪ್ರಧಾನ ಕಾರ್ಯದರ್ಶಿ ಶ್ರೀಧರ ಬಿ.ನಾಯ್ಕ, ಸದಸ್ಯರಾದ ಕೃಷ್ಣ ಮಹಾಲೆ, ಎನ್.ಡಿ.ಖಾರ್ವಿ, ಮಹಾದೇವ ಮೊಗೇರ, ಶಂಕರ ಶೆಟ್ಟಿ, ಶ್ರೀಪಾದ ಎನ್.ಕಂಚುಗಾರ, ಸುರೇಶ ಭಟ್ಕಳಕರ್ ಸೇರಿದಂತೆ ಕಮಿಟಿ ಇತರರು ಇದ್ದರು.