ಕುಮಟಾ: ಸಂಪೂರ್ಣ ಹೊಂಡಮಯವಾದ ಪಟ್ಟಣದ ಹಳೇ ಸರ್ಕಾರಿ ಆಸ್ಪತ್ರೆಯಿಂದ ಚಿತ್ರಗಿ ರಾಮಮಂದಿರ ಕ್ರಾಸ್‌ವರೆಗಿನ ರಸ್ತೆಯನ್ನು ಮೂರುಕಟ್ಟೆಯ ಆಟೋ ಚಾಲಕ- ಮಾಲೀಕರು ಶ್ರಮದಾನದ ಮೂಲಕ ತಾತ್ಕಾಲಿಕವಾಗಿ ದುರಸ್ತಿಪಡಿಸುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾದರು.
ಪಟ್ಟಣದ ಮೂರುಕಟ್ಟೆಯಲ್ಲಿರುವ ಹಳೇ ಸರ್ಕಾರಿ ಆಸ್ಪತ್ರೆಯಿಂದ ಚಿತ್ರಗಿಯ ರಾಮಮಂದಿರ ಕ್ರಾಸ್ ವರೆಗಿನ ಸುಮಾರು ಒಂದು ಕಿಮೀ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು, ಸಂಚಾರ ದುಸ್ತರವಾಗಿದೆ. ರಸ್ತೆಯಲ್ಲಿ ಬಿದ್ದ ಹೊಂಡಗಳನ್ನು ತಪ್ಪಿಸಲು ಹೋಗಿ ಅನೇಕ ಬೈಕ್ ಸವಾರರು ಬಿದ್ದು ಗಾಯಗೊಂಡಿದ್ದರು. ಹೊಂಡ ಮುಚ್ಚಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಕೋಡಬೇಕೆಂದು ಪುರಸಭೆಯನ್ನು ಸಾಕಷ್ಟು ಬಾರಿ ಒತ್ತಾಯಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಹಾಗಾಗಿ ಮೂರುಕಟ್ಟೆಯ ಆಟೋ ಚಾಲಕರಾದ ಚಂದ್ರಹಾಸ ನಾಯ್ಕ, ಸತೀಶ ಪಟಗಾರ, ಬಾಬು ನಾಯ್ಕ, ಮದನ ಪಟಗಾರ, ಗುರು ನಾಯ್ಕ, ಚಂದ್ರು ಮಡಿವಾಳ, ಗಣೇಶ ನಾಯ್ಕ, ಯೋಗೀಶ ನಾಯ್ಕ, ರಮೇಶ ನಾಯ್ಕ, ಮನು ನಾಯ್ಕ, ಜಯಂತ ಪಟಗಾರ, ಪ್ರಕಾಶ್ ನಾಯ್ಕ, ಮಣಿಕಂಠ ನಾಯಕ, ವಿನಾಯಕ ನಾಯ್ಕ, ಗಣಪತಿ ಗಾಡಿಗ, ಈಶ್ವರ ಗೌಡ, ಪ್ರಭಾಕರ ನಾಯ್ಕ ಇತರರು ಸೇರಿ ಚಿತ್ರಗಿ ರಸ್ತೆಯಲ್ಲಿ ಬಿದ್ದ ಹೊಂಡಗಳನ್ನು ಕಲ್ಲು-ಮಣ್ಣುಗಳನ್ನು ಹಾಕಿ ಮುಚ್ಚುವ ಮೂಲಕ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಮೂರುಕಟ್ಟೆ ಆಟೋ ಚಾಲಕರ ಸಾಮಾಜಿಕ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.