ಭಟ್ಕಳ: ತಾಲೂಕಿನ ಕಿತ್ರೆಯ ಶ್ರೀಕ್ಷೇತ್ರ ದೇವಿಮನೆ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶಿವಶಾಂತಿಕಾ ಧಾರ್ಮಿಕ ಮಂಡಳಿಯ 8ನೇ ವರ್ಷದ ಧಾರ್ಮಿಕ ಕಾರ್ಯಕ್ರಮದ ಪ್ರಯುಕ್ತ ನವಗ್ರಹ ಹೋಮ ಹಾಗೂ ಹಿರಿಯ ವೈದಿಕರು, ಅಡುಗೆ ಭಟ್ಟರಿಗೆ ಸನ್ಮಾನ ನಡೆಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ದೇವಿಮನೆ ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ.ಲಂಬೋದರ ಭಟ್ಟ, ಇತ್ತೀಚಿನ ವರ್ಷಗಳಲ್ಲಿ ದೇವಿಮನೆ ಕ್ಷೇತ್ರ ಸಾಕಷ್ಟು ಅಭಿವೃದ್ಧಿ ಕಂಡು ಭಕ್ತರ ಶಕ್ತಿಕ್ಷೇತ್ರವಾಗಿದೆ. ದೇವಿಮನೆಯಲ್ಲಿ ಧಾರ್ಮಿಕ ಮಂಡಳಿಯವರು ವರ್ಷಂಪ್ರತಿ ವಾರ್ಷಿಕೋತ್ಸವ ಏರ್ಪಡಿಸಿ ಹೋಮ ಹವನದೊಂದಿಗೆ ಹಿರಿಯ ವೈದಿಕರನ್ನು ಗುರುತಿಸಿ ಗೌರವಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.
ಸನ್ಮಾನಿತರಾದ ಇನ್ನೋರ್ವ ಹಿರಿಯ ವೈದಿಕ ಸುಬ್ರಹ್ಮಣ್ಯ ಉಪಾಧ್ಯಾಯ ಮಾತನಾಡಿ, ಧಾರ್ಮಿಕ ಮಂಡಳಿಯವರು ವೈದಿಕ ವೃತ್ತಿಯಲ್ಲಿರುವವರನ್ನು ಗುರುತಿಸಿ ಗೌರವಿಸುತ್ತಿರುವುದು ಶ್ಲಾಘನೀಯ ಕಾರ್ಯ. ಮಂಡಳಿಯಿಂದ ನಿರಂತರವಾಗಿ ಇಂತಹ ಉತ್ತಮ ಕಾರ್ಯಕ್ರಮ ನಡೆಯಲಿ ಎಂದರಲ್ಲದೇ, ಗುರುಗಳು ಮತ್ತು ಹಿರಿಯರ ಆಶೀರ್ವಾದರಿಂದ ಹೆಚ್ಚಿನ ಸಂಖ್ಯೆಯಲ್ಲಿ ವೈದಿಕರು ತಯಾರಾಗಿರುವುದು ಉತ್ತಮ ಬೆಳವಣಿಗೆ ಎಂದರು.
ವೇ.ಮೂ.ಸುಬ್ರಾಯ ಭಟ್ಟ, ಅಡುಗೆ ಭಟ್ಟ ಗಣಪತಿ ಹೆಬ್ಬಾರ್ ಮಕ್ಕಿಗದ್ದೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ದೇವಸ್ಥಾನದ ಮೊಕ್ತೇಸರ ಉಮೇಶ ಹೆಗಡೆ, ಭವತಾರಣಿ ಸೀಮಾ ಪರಿಷತ್‌ನ ಅಧ್ಯಕ್ಷ ವಿನಾಯಕ ಭಟ್ಟ ಬೆಟ್ಕೂರು, ದೇವಿಮನೆ ಅರ್ಚಕ ವೇ.ಮೂ.ಬಾಲಚಂದ್ರ ಭಟ್ಟ, ಶ್ರೀಧರ ಭಟ್ಟ, ಗುರು ಉಪಾಧ್ಯಾಯ, ಉಮಾಶಿವ ಉಪಾಧ್ಯಾಯ, ಧನ್ವಂತರಿ ದೇವಸ್ಥಾನದ ಅರ್ಚಕ ಶಂಕರ ಭಟ್ಟ, ದೇವಿಮನೆ ಆಡಳಿತ ಮಂಡಳಿ ಅಧ್ಯಕ್ಷ ಶಿವಾನಂದ ಹೆಬ್ಬಾರ್, ಪ್ರಮುಖರಾದ ನಾರಾಯಣ ಹೆಬ್ಬಾರ್ ಬೆಣಂದೂರು, ಶ್ರೀನಿವಾಸ ಹೆಗಡೆ ಸೇರಿದಂತೆ ಧಾರ್ಮಿಕ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.
ಧಾರ್ಮಿಕ ಮಂಡಳಿಯ ಪ್ರಮುಖರಾದ ನೀಲಕಂಠ ಉಪಾಧ್ಯಾಯ ಸ್ವಾಗತಿಸಿದರೆ, ಶಂಭು ಉಪಾಧ್ಯಾಯ ನಿರೂಪಿಸಿದರು. ಶಾಂಭವ ಉಪಾಧ್ಯಾಯ ವಂದಿಸಿದರು. ವಾರ್ಷಿಕೋತ್ಸವದ ಅಂಗವಾಗಿ 1008ರ ಸಂಖ್ಯೆಯಲ್ಲಿ ನವಗ್ರಹಹೋಮ, ಗಣಪತಿ, ರುದ್ರ ಹೋಮ, ದುರ್ಗಾಶಾಂತಿ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಂಡಿತು.