ಭಟ್ಕಳ: ಇಲ್ಲಿನ ರಥಬೀದಿಯಲ್ಲಿನ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಯು 160 ವರ್ಷ ಹಿಂದಿನದಾಗಿದ್ದು, ಕಟ್ಟಡ ಸಂಪೂರ್ಣ ಹಾಳಾಗಿ ಶಿಥಿಲಾವಸ್ಥೆಗೆ ತಲುಪಿದೆ. ಹೊಸ ಕೊಠಡಿ ಮಂಜೂರು ಮಾಡಿಕೊಡಬೇಕು ಎಂದು ಶಾಲಾ ವಿದ್ಯಾರ್ಥಿಗಳ ಪಾಲಕರು ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ವಿದ್ಯಾರ್ಥಿ ಪಾಲಕ ನಾಗರಾಜ ದೇವಾಡಿಗ, ಶಾಲೆಯ ಎಲ್ಲಾ ಕೊಠಡಿಗಳು ಸಂಪೂರ್ಣವಾಗಿ ಶಿಥಿಲಾವಸ್ಥೆಗೆ ಬಂದು ತಲುಪಿದೆ. ಹೀಗಾಗಿ ಇಲ್ಲಿಗೆ ಮಕ್ಕಳನ್ನು ಕಳುಹಿಸಿಕೊಡುವುದು ಹಾಗೂ ಶಿಥಿಲಾವಸ್ಥೆಯ ಕೊಠಡಿಯಲ್ಲಿ ಮಕ್ಕಳಿಗೆ ಪಾಠ ಬೋಧನೆ ಮಾಡುವುದು ಮಕ್ಕಳ ಸುರಕ್ಷತಾ ದೃಷ್ಟಿಯಿಂದ ತುಂಬಾ ಅಪಾಯಕಾರಿಯಾಗಿದೆ ಎಂದು ತಿಳಿಸಿದರು.
ಅಡುಗೆ ಕೋಣೆಗೆ ತಾಗಿ ಮಕ್ಕಳ ಶೌಚಾಲಯ ಇದ್ದು, ಸ್ವಚ್ಚತೆಗೆ ವ್ಯವಸ್ಥಿತ ಸೌಲಭ್ಯಗಳಿಲ್ಲದ ಕಾರಣ ಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತಿದೆ. ಮಳೆಗಾಲದಲ್ಲಿ ಅಡುಗೆ ತಯಾರಿಸಲು ಕೂಡ ಇಲ್ಲಿ ಕಷ್ಟವಾಗುತ್ತದೆ ಎಂದು ಅವರು ತಿಳಿಸಿದರು.
ಎಸ್‌ಡಿಎಮ್‌ಸಿ ಸದಸ್ಯ ಹರೀಶ ದೇವಾಡಿಗ ಮಾತನಾಡಿ, ಈ ಹಿಂದೆ ಶಾಲೆಯ 150ನೇ ವರ್ಷದ ಕಾರ್ಯಕ್ರಮದಲ್ಲಿ ಈ ಹಿಂದಿನ ಶಾಸಕರು ಹೊಸ ಕಟ್ಟಡ ನಿರ್ಮಿಸಿಕೊಡುವ ಭರವಸೆ ನೀಡಿದ್ದರು. ಈಗಿನ ಶಾಸಕರು ಸಹ ಅದನ್ನೇ ಮುಂದುವರೆಸಿದ್ದಾರೆಯೇ ಹೊರತಾಗಿ ಕಟ್ಟಡದ ಮಂಜೂರಿಗೆ ಇನ್ನು ಸ್ಪಂದಿಸಿಲ್ಲ. ಒಂದುವೇಳೆ ಕಟ್ಟಡದಿಂದ ಅನಾಹುತ ಸಂಭವಿಸಿದರೆ ಹೊಣೆ ಯಾರು? ವಾರದ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕ ಸುನೀಲ ನಾಯ್ಕ ಹಾಗೂ ಉಪವಿಭಾಗಾಧಿಕಾರಿ ಮಮತಾದೇವಿ ಅವರಿಗೆ ಮನವಿ ಸಲ್ಲಿಸಿದರೂ ಈ ಕುರಿತು ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಎಸ್‌ಡಿಎಮ್‌ಸಿ ಉಪಾಧ್ಯಕ್ಷ ರಾಮಚಂದ್ರ ದೇವಾಡಿಗ, ದಿನೇಶ ನಾಯ್ಕ, ಮಹಾಬಲೇಶ್ವರ ನಾಯ್ಕ, ರವಿಕಾಂತ ಬಾಂದೇಕರ, ಲಕ್ಷ್ಮೀಶ ಶಾಸ್ತ್ರಿ ಸೇರಿದಂತೆ ಪಾಲಕರಾದ ಸುರೇಂದ್ರ ಪೂಜಾರಿ, ಸೀಮಾ ನಾಯ್ಕ, ಜ್ಯೋತಿ ನಾಯ್ಕ, ರಾಘವೇಂದ್ರ ನಾಯ್ಕ, ಸುಬ್ರಾಯ ನಾಯ್ಕ ಇದ್ದರು.
ವಾರದಲ್ಲಿ ಸ್ಪಂದಿಸದಿದ್ದರೆ ಧರಣಿ: ಶಾಲೆಯ ಕಟ್ಟಡದ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಶಾಸಕರು ಇಲ್ಲಿಗೆ ಭೇಟಿ ನೀಡಿ ಒಂದು ವಾರದೊಳಗೆ ಸ್ಪಂದಿಸಬೇಕು. ಇಲ್ಲವಾದಲ್ಲಿ ಶಾಲಾ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಾಲೆಯ ಮುಂಭಾಗದಲ್ಲಿ ಧರಣಿ ನಡೆಸಲಾಗುವುದು ಎಂದು ಪಾಲಕರು ಎಚ್ಚರಿಸಿದ್ದಾರೆ.
ಕೋಟ್…
ಕಳೆದ ವರ್ಷದಿಂದ ಹೊಸ ಕಟ್ಟಡದ ಮಂಜೂರಿಗಾಗಿ ಶಾಸಕರಲ್ಲಿ ಪಾಲಕರು ಮನವಿ ಮಾಡುತ್ತಿದ್ದಾರೆ. ಈವರೆಗೆ ಸ್ಪಂದನೆ ಸಿಕ್ಕಿಲ್ಲ. ಮಕ್ಕಳ ಜೀವಕ್ಕೆ ಹಾನಿಯಾದರೆ ಶಾಸಕರು, ಸಚಿವರು, ಅಧಿಕಾರಿಗಳು ಹೊಣೆಗಾರರಾಗಲಿದ್ದಾರಾ? ವಾರದೊಳಗೆ ಇದಕ್ಕೆ ಸ್ಪಂದಿಸಬೇಕು.–· ಪ್ರೇಮ ನಾಯ್ಕ, ವಿದ್ಯಾರ್ಥಿ ಪಾಲಕರು