ಮುಂಡಗೋಡ: ಬಸ್ನಲ್ಲಿ ಐಫೋನ್ ಬಿಟ್ಟು ಇಳಿದಿದ್ದ ಪ್ರಯಾಣಿಕನೊಬ್ಬನಿಗೆ ಪೊಲೀಸರ ಮೂಲಕ ಫೋನ್ ಮರಳಿಸಿ ಸಾರಿಗೆ ಬಸ್ ಚಾಲಕರೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾನೆ.
ಕಾರವಾರ ಡಿಪೋ ಚಾಲಕ ಮಂಜುನಾಥ ಎಲ್.ನಾಯಕ ಪ್ರಾಮಾಣಿಕತೆ ಮೆರೆದಿರುವರು. ಜುಲೈ 15ರಂದು ಮುಂಡಗೋಡ ಟಿಬೇಟ್ ಕ್ಯಾಂಪ್ ನಂ.2 ಬೌದ್ಧ ಸನ್ಯಾಸಿ ಶರೇಬ್ ಜಂಬಾ ಎನ್ನುವವರು ಹುಬ್ಬಳ್ಳಿ- ಉಡುಪಿ ಸಾರಿಗೆ ಬಸ್ನಲ್ಲಿ ಹುಬ್ಬಳ್ಳಿಯಿಂದ ಮುಂಡಗೋಡಗೆ ಪ್ರಯಾಣ ಬೆಳೆಸಿದ್ದರು. ತಮ್ಮ ಐಫೋನ್ ಹಾಗೂ ಕೆಲವು ಪುಸ್ತಕಗಳನ್ನು ಬಸ್ನಲ್ಲಿಯೇ ಮರೆತು ಅವರು ಮುಂಡಗೋಡ ಬಸ್ ನಿಲ್ದಾಣದಲ್ಲಿ ಇಳಿದುಕೊಂಡಿದ್ದಾರೆ.
ನಂತರ ಬಸ್ನಲ್ಲಿ ಐಫೋನ್ ಮರೆತಿರುವುದು ಅರಿವಿಗೆ ಬರುತ್ತಿದ್ದಂತೆ ಜುಲೈ 17ರಂದು ಪೊಲೀಸ್ ಠಾಣೆಗೆ ತಿಳಿಸಿದ್ದಾರೆ. ತಕ್ಷಣವೇ ಪಿಎಸೈ ಎನ್.ಡಿ.ಜಕ್ಕಣ್ಣವರ ಬಸ್ ಟಿಕೆಟ್ ಪರಿಶೀಲಿಸಿ ಕಾರವಾರ ಡಿಪೋ ಬಸ್ ಎಂದು ತಿಳಿದು, ನಂತರ ಅವರು ಕಾರವಾರ ಡಿಪೋ ಮ್ಯಾನೇಜರಿಂದ ಚಾಲಕನ ಫೋನ್ ನಂಬರ್ ಪಡೆದು ಚಾಲಕನಿಗೆ ತಿಳಿಸಿದ್ದಾರೆ. ಈ ವೇಳೆ ಚಾಲಕ ಬಸ್ನಲ್ಲಿ ಐಫೋನ್ ಇರುವ ಮಾಹಿತಿ ನೀಡಿದ್ದಾನೆ. ಐಫೋನ್ ಹಾಗೂ ಪುಸ್ತಕಗಳನ್ನು ಜೋಪಾನವಾಗಿಟ್ಟುಕೊಂಡು ಬಂದು ಸೋಮವಾರ ಮುಂಡಗೋಡ ಬಸ್ ನಿಲ್ದಾಣದಲ್ಲಿ ಬೌದ್ಧ ಸನ್ಯಾಸಿ ಶರೇಬ್ ಜಂಬಾಗೆ ಪಿಎಸೈ ಎನ್.ಡಿ.ಜಕ್ಕಣ್ಣವರ ಸಮ್ಮುಖದಲ್ಲಿ ನೀಡಿದ್ದಾರೆ.
ಬಸ್ ಚಾಲಕನ ಪ್ರಾಮಾಣಿಕತೆಗೆ ಹಾಗೂ ಕರ್ತವ್ಯನಿಷ್ಠೆ ತೋರಿಸಿದ ಪಿಎಸೈ ಎನ್.ಡಿ.ಜಕ್ಕಣ್ಣವರಿಗೆ ಬೌದ್ಧ ಸನ್ಯಾಸಿ ಶರೇಬ್ ಜಂಬಾ ಕೃತಜ್ಞತೆ ಅರ್ಪಿಸಿದ್ದಾರೆ.