ಭಟ್ಕಳ: ಹೆಬಳೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಜಾಮಿಯಾಬಾದ್ ರಸ್ತೆಯಲ್ಲಿರುವ ನ್ಯೂ ಶಮ್ಸ್ ಶಾಲೆಯ ಆವರಣದ ಮುಂದೆ ಕಸದ ಮೂಟೆಗಳು ರಾಶಿ ರಾಶಿಯಾಗಿ ಬಂದು ಬಿದ್ದಿದ್ದು, ಇದರಿಂದಾಗಿ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ವ್ಯತಿರಿಕ್ತವಾದ ಪರಿಣಾಮ ಉಂಟಾಗಲಿದೆ ಎಂದು ನ್ಯೂ ಶಮ್ಸ್ ಶಾಲೆಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಅನಂ ಆಲಾ ಎಂ.ಟಿ. ಹೇಳಿದ್ದಾರೆ.
ಈ ಹಿಂದೆ ತಾಲೂಕಾಡಳಿತದ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲಾಡಳಿತ ಈ ಕಡೆಗೆ ಗಮನ ಹರಿಸಬೇಕು. ಈ ರಸ್ತೆಯಲ್ಲಿ ಹಲವಾರು ಶಾಲಾ ಮಕ್ಕಳು ಓಡಾಡುತ್ತಾರೆ. ಅಲಿ ಪಬ್ಲಿಕ್ ಸ್ಕೂಲ್, ವುಮೆನ್ಸ್ ಸೆಂಟರ್, ಸರ್ಕಾರಿ ಪ್ರಾಥಮಿಕ ಶಾಲೆ, ಜಾಮಿಯಾ ಇಸ್ಲಾಮಿಯಾ ಶಿಕ್ಷಣ ಸಂಸ್ಥೆ ಹೀಗೆ ಹತ್ತಾರು ಶಿಕ್ಷಣ ಸಂಸ್ಥೆಗಳು ಸಾವಿರಾರು ವಿದ್ಯಾರ್ಥಿಗಳು, ಶಾಲಾ ವಾಹನಗಳು ನಿತ್ಯವೂ ಓಡಾಡುತ್ತಿದ್ದು, ರಸ್ತೆಯ ಮೇಲೆ ಎಸೆದ ತ್ಯಾಜ್ಯದಿಂದಾಗಿ ದುರ್ವಾಸನೆ ಬೀರುತ್ತಿದೆ. ಇದು ಮಕ್ಕಳ ಕಲಿಕೆಯ ಮೇಲೂ ಭಾರಿ ದುಷ್ಪರಿಣಾಮ ಬೀಳುತ್ತಲಿದೆ ಎಂದ ಅವರು, ಈ ಸಮಸ್ಯೆಯನ್ನು ಬಗೆಹರಿಸುವಲ್ಲಿ ಹೆಬಳೆ ಪಂಚಾಯತ್ ಸಂಪೂರ್ಣವಾಗಿ ವಿಫಲವಾಗಿದೆ ಎಂದು ದೂರಿದರು.
ಇಷ್ಟರವರೆಗೆ ಕೇವಲ ಹನಿಫಾಬಾದ್, ಅಬುಬಕರ್ ಮಸೀದಿಯ ಮುಂದೆ ಬೀಳುತ್ತಿದ್ದ ತ್ಯಾಜ್ಯ ಈಗ ಶಾಲಾ ಆವರಣದವರೆಗೂ ಬಂದಿದೆ. ಮುಂದೊಂದು ದಿನ ಶಾಲೆಯ ಒಳಗೂ ಪ್ರವೇಶಿಸಿದರೂ ಆಶ್ಚರ್ಯವಿಲ್ಲ. ಆದ್ದರಿಂದ ಜಿಲ್ಲಾಡಳಿತ ಕೂಡಲೇ ಈ ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಂಡು ಬಗೆಹರಿಸಬೇಕೆಂದು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.