ಗೋಕರ್ಣ: ದೃಢವಾದ ನಂಬಿಕೆಯಲ್ಲಿ ಅಡಗಿದ ವಿಜ್ಞಾನ ಆಧುನಿಕ ವಿಜ್ಞಾನಕ್ಕೆ ಗೊತ್ತಿಲ್ಲ. ಇದನ್ನು ಆಧುನಿಕ ವಿಜ್ಞಾನ ಅರ್ಥ ಮಾಡಿಕೊಳ್ಳಬೇಕಾದರೆ ಅದು ನೂರಾರು ಮೈಲಿ ದೂರ ಸಾಗಬೇಕು. ವಿಚಾರವಾದದ ಹೆಸರಿನಲ್ಲಿ ನಂಬಿಕೆಯ ವಿಜ್ಞಾನವನ್ನು ನಾವು ಹಾಳು ಮಾಡಿಕೊಳ್ಳುತ್ತಿದ್ದೇವೆ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.
ಅಶೋಕೆಯಲ್ಲಿ ಕೈಗೊಂಡಿರುವ ಗುರುಕುಲ ಚಾತುಮಾಸ್ಯದ ಆರನೇ ದಿನ ನಂಬಿಕೆ ಎಂಬ ವಿಷಯದ ಬಗ್ಗೆ ಆಶೀರ್ವಚನ ನೀಡಿದ ಅವರು, ಜಗತ್ತು ನಿಂತಿರುವುದೇ ನಂಬಿಕೆಯ ಮೇಲೆ. ಅದು ಇಲ್ಲದಿದ್ದರೆ ಜೀವನದಲ್ಲಿ ಯಾವ ಸಾರವೂ ಇಲ್ಲ. ಎಲ್ಲ ಬಂಧಗಳೂ ಉಳಿಯುವುದು ನಂಬಿಕೆಯ ಆಧಾರದಲ್ಲಿ. ಎಲ್ಲ ಸಂಬಂಧಗಳನ್ನು ಗಟ್ಟಿ ಮಾಡುವ ಬಂಧವೇ ನಂಬಿಕೆ. ನಂಬಿಕೆ ಎನ್ನುವುದು ಒಂದು ಭಾವ; ಅಚಲವಾದ ಭರವಸೆ, ನಮಗಿಂತ ದೊಡ್ಡವರ ಮೇಲೆ, ಎಲ್ಲಕ್ಕಿಂತ ದೊಡ್ಡದಾದ ದೈವೀಶಕ್ತಿಯ ಮೇಲೆ ಇರುವ ಭಾವ. ನಂಬಿಕೆ ಇದ್ದರೆ ಮಾತ್ರ ಭಕ್ತಿ ಬರಲು ಸಾಧ್ಯ ಎಂದು ಬಣ್ಣಿಸಿದರು.
ಗುರುಗಳಲ್ಲಿ, ಹಿರಿಯರಲ್ಲಿ ಮುಖ್ಯವಾಗಿ ವಿಶ್ವದ ಮೂಲದಲ್ಲಿ, ನಮಗೆಲ್ಲ ಬದುಕು ನೀಡಿದ ಶಕ್ತಿಯನ್ನು ಅಚಲವಾಗಿ ನಂಬಿದಾಗ ಅದು ಬಹುವಾದ ಫಲ ನೀಡುತ್ತದೆ. ಭಕ್ತರು ದೇವರಲ್ಲಿ ಪ್ರಾರ್ಥಿಸಬೇಕಾದ್ದೇ ದೃಢಭಕ್ತಿ. ದೃಢನಂಬಿಕೆಯಿಂದ ಎಲ್ಲವೂ ಸಿದ್ಧಿಯಾಗುತ್ತದೆ ಎಂದು ಹೇಳಿದರು.
ನಂಬಿಕೆ ನಮ್ಮನ್ನು ದೇವರ ಜತೆಗೆ, ನಮ್ಮ ಸುತ್ತಮುತ್ತಲಿನ ಜಗತ್ತಿನ ಜತೆಗೆ ಗಾಢವಾದ ಬಂಧವನ್ನು ರೂಪಿಸುತ್ತದೆ. ದೇವರಲ್ಲಿ ಅಚಲವಾದ ನಂಬಿಕೆ ಅಗತ್ಯ. ನಂಬಿಕೆಯೇ ಜೀವನದ ಬುನಾದಿ. ಆದರೆ ಇಂದು ತಂದೆ, ತಾಯಿ, ಮಕ್ಕಳು, ಗಂಡ, ಹೆಂಡತಿ ಮಧ್ಯೆಯೇ ನಂಬಿಕೆ ಇಲ್ಲದೇ ಅನುಮಾನ ಪಡುವ ಸ್ಥಿತಿ ಇದೆ ಎಂದರು.
ನಂಬಿಕೆ ಅತ್ಯಂತ ದೃಢವಾಗಿರಬೇಕು: ಗಟ್ಟಿಯಾದ ನಂಬಿಕೆ ಪವಾಡಗಳನ್ನು ಮಾಡಬಲ್ಲದು ಎಂದು ಭಕ್ತಪ್ರಹ್ಲಾದನ ನಿದರ್ಶನ ಸಹಿತ ವಿವರಿಸಿದರು. ವಿಶ್ವಾಸ ಎನ್ನುವುದು ಶ್ವಾಸಕ್ಕಿಂತಲೂ ದೊಡ್ಡದು. ಸಂಶಯ ಹೆಚ್ಚಿದಷ್ಟೂ ಆತನನ್ನು ವಿನಾಶಕ್ಕೆ ಅದು ತಳ್ಳುತ್ತದೆ. ಮನುಷ್ಯನ ಮನಸ್ಸಿನ ವಿಶ್ವಾಸದ ವಿಜ್ಞಾನ ದೊಡ್ಡದು ಎಂದು ಹೇಳಿದರು.
ನಂಬಿಕೆಯಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಅದು ತಕ್ಷಣಕ್ಕೆ ಸಿಗುವ ಫಲ; ನಂಬಿಕೆ ಇಲ್ಲದವನ ಹೃದಯ ರೌರವ ನರಕ, ಪೂರ್ತಿ ನಂಬಿಕೆ ಇದ್ದವನಿಗೆ ಬೆಂಕಿ ಕೂಡಾ ತಂಪಾಗುತ್ತದೆ. ಭರವಸೆ ಕಳೆದುಕೊಂಡಾಗ ಮನುಷ್ಯ ಆತ್ಮಹತ್ಯೆಯಂಥ ದುಸ್ಸಹಾಸಕ್ಕೆ ಕೈಹಾಕುತ್ತಾನೆ. ನಂಬಿಕೆ ಇಲ್ಲದಿದ್ದಾಗ ಜೀವನದ ಅಡಿಪಾಯವೇ ಅಲುಗಾಡುತ್ತದೆ ಎಂದರು.
ಭಕ್ತಿಗೆ ನಂಬಿಕೆಯೇ ಮೂಲ. ವೇದ ಹೇಳುವಂತೆ, ನಂಬಿಕೆಯಿಂದಲೇ ಎಲ್ಲ ಇಷ್ಟಾರ್ಥ ಸಿದ್ಧಿಯಾಗುತ್ತದೆ. ಒಂದರ್ಥದಲ್ಲಿ ಶ್ರದ್ಧೆಯೇ ನಂಬಿಕೆ. ಇದು ಎಲ್ಲ ಅಪೇಕ್ಷೆಯನ್ನು ಪೂರ್ಣಮಾಡಿಕೊಳ್ಳಬಲ್ಲದು. ಆದರೆ ಇಂದು ನಂಬಿಕೆ ಮತ್ತು ಆಧುನಿಕ ವಿಜ್ಞಾನದ ನಡುವೆ ಸಂಘರ್ಷದ ಸಂದರ್ಭ ಇದೆ. ನಂಬಿಕೆಯನ್ನು ಮೂಢನಂಬಿಕೆ, ಕಂದಾಚಾರ ಎಂದು ವಿಚಾರವಾದಿಗಳು ತಳ್ಳಿಹಾಕುತ್ತಾರೆ. ಆದರೆ ವಾಸ್ತವವಾಗಿ ವಿಜ್ಞಾನದಿಂದ ಸಾಧ್ಯವಾಗದ್ದು ನಂಬಿಕೆಯಿಂದ ಸಾಧ್ಯವಾಗುತ್ತದೆ ಎಂದು ವಿಶ್ಲೇಷಿಸಿದರು.
ಆರನೇ ದಿನವಾದ ಸೋಮವಾರ ಸಾಗರ ಮಂಡಲದ ಕೆಳದಿ, ಉಳವಿ, ಕ್ಯಾಸನೂರು ವಲಯದ ಭಕ್ತರಿಂದ ಭಿಕ್ಷಾಸೇವೆ ನಡೆಯಿತು. ಮಾಜಿ ಶಾಸಕಿ ಶಾರದಾ ಶೆಟ್ಟಿ ಅತಿಥಿಯಾಗಿ ಆಗಮಿಸಿದ್ದರು.