ಹಳಿಯಾಳ: ಮಹಿಳೆ ಸಾಮಾಜಿಕ, ಶೈಕ್ಷಣಿಕ, ಹಾಗೂ ಆರ್ಥಿಕ ಸ್ವಾವಲಂಬನೆ ಸಾಧಿಸುವ ಉದ್ಯಮಶೀಲ ಮಹಿಳೆಯಾಗಬೇಕು. ಮಹಿಳೆಯರು ಆತ್ಮಾಭಿಮಾನ ಮತ್ತು ಸ್ವಾಭಿಮಾನ ಬದುಕು ಸಾಗಿಸಬೇಕು ಎಂದು ಕೆನರಾ ಬ್ಯಾಂಕ್ ಆರ್ಸೆಟ್ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಸಾದ್ ಆರ್ ದೇಶಪಾಂಡೆ ಹೇಳಿದರು.
ಕೆನರಾ ಬ್ಯಾಂಕ್ ಹಾಗೂ ವಿ.ಆರ್.ಡಿ. ಎಮ್. ಟ್ರಸ್ಟ ಪ್ರಾಯೋಜಕತ್ವದಲ್ಲಿ ಕಾರ್ಯ ಪ್ರವೃತ್ತವಾಗಿರುವ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆಯಡಿ ತಾಲೂಕಿನ ಯಡೋಗಾ ಗ್ರಾಮದಲ್ಲಿ ಮಹಿಳೆಯರಿಗಾಗಿ 30 ದಿನಗಳ ಹೊಲಿಗೆ ತರಬೇತಿ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.
ಮಹಿಳೆ ತನ್ನ ಜವಾಬ್ದಾರಿಯನ್ನು ನಿರ್ವಹಿಸಿ ಅರ್ಥಿಕವಾಗಿ ಸ್ವಾವಲಂಬನೆ ಬದುಕು ಸಾಗಿಸುವ ಮೂಲಕ ಸಮಾಜದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದು ಸಂತೋಷದ ವಿಷಯ. ಪುರುಷರ ಜೊತೆ ಸಮಾನ ಹೆಜ್ಜೆ ಇಟ್ಟು ತನ್ನ ಕುಟುಂಬದ ನಿರ್ವಹಣೆಯಲ್ಲಿ ಸಮಭಾಗಿಯಾಗಿ ಯಶಸ್ಸಿನ ದಾರಿಯಲ್ಲಿ ಸಾಗಬೇಕು. ಇದು ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ದಾರಿಯಾಗಲಿದೆ ಎಂದರು. ಸಂಸ್ಥೆಯ ನಿರ್ದೇಶಕ ಪ್ರಸನ್ನಕುಮಾರ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆಯು ಗ್ರಾಮೀಣ ಭಾಗದ ಸಾವಿರಾರು ಯುವಕ ಯುವತಿಯರಿಗೆ ಉಚಿತ ಸ್ವ ಉದ್ಯೋಗ ತರಬೇತಿ ನೀಡುವ ಮೂಲಕ ಅವರ ಜೀವನಕ್ಕೆ ದಾರಿದೀಪವಾಗಿದೆ ಇದರ ಪ್ರಯೋಜನ ಪಡೆದು ಇತರರಿಗೆ ಮಾದರಿಯಾಗಬೇಕೆಂದು ತಿಳಿಸಿದರು.
ಯಡೋಗಾ ಗ್ರಾಮದ ಸಮಾಜ ಸೇವಕ ರಾಬರ್ಟ್ ಕೇರವಾಡಕರ ಮಾತನಾಡಿ, ಮಹಿಳೆ ಕೇವಲ ಮನೆಗೆಲಸಕ್ಕೆ ಸೀಮಿತವಾಗಿರದೇ ಆರ್ಥಿಕ ಸ್ವಾವಲಂಬನೆ ಸಾಧಿಸುವ ಉದ್ಯಮಶೀಲ ಮಹಿಳೆಯಾಗಬೇಕು. ಪುರುಷರ ಜೊತೆ ಸಮಾನ ಹೆಜ್ಜೆ ಇಟ್ಟು ತನ್ನ ಕುಟುಂಬದ ನಿರ್ವಹಣೆಯಲ್ಲಿ ಸಮಭಾಗಿಯಾಗಬೇಕೆಂದು ತಿಳಿಸಿದರು.
ಹೊಲಿಗೆ ತರಬೇತಿಯ ಸಂಪನ್ಮೂಲ ವ್ಯಕ್ತಿ ಅನಿತಾ ಪಾಟೀಲ್ ಮಾತನಾಡಿ, ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆಯು ವಿವಿಧ ಕಾರ್ಯಕ್ರಮಗಳನ್ನು ಹಳಿಯಾಳ ತಾಲೂಕಿನ ಅನೇಕ ಗ್ರಾಮದಲ್ಲಿ ಹಮ್ಮಿಕೊಂಡಿದ್ದು, ಹಲವಾರು ಮಹಿಳೆಯರು ಪ್ರಯೋಜನ ಪಡೆದುಕೊಂಡಿದ್ದಾರೆ. ಸಂಸ್ಥೆಯ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.
ಕೆನರಾ ಬ್ಯಾಂಕ್ ಆರ್ಸೆಟ್ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯ ಕಾರ್ಯದರ್ಶಿ ಶ್ಯಾಮ ಕಾಮತ್ ಪಾಂಡುರಂಗ್ ಪಾಟೀಲ್, ಮಾಜಿ ಸದಸ್ಯರು, ತಾಲೂಕ್ ಪಂಚಾಯತ್, ಯಡೋಗಾ. ಸೋಮನಿಂಗ ಕಾಕತಕರ, ಮಾಜಿ ಸದಸ್ಯರು, ಗ್ರಾಮ ಪಂಚಾಯತ್, ಯಡೋಗಾ ಊರಿನ ಹಿರಿಯರಾದ ಸಹಾದೇವ ಹಳದುಕರ್, ಮಾತ್ರು ಪಾಟೀಲ್, ಯಡೋಗಾ ಗ್ರ. ಪಂ. ಗ್ರಾಮೀಣ ಅಭಿವೃದ್ಧಿ ಅಧಿಕಾರಿ,ಮರಿಯಪ್ಪ ಎಮ್. ಮೇತ್ರಿ, ಸಂಸ್ಥೆಯ ಯೋಜನಾ ಸಯೋಜಕ, ವಿನಾಯಕ ಚವ್ಹಾಣ, ಯೋಜನಾಧಿಕಾರಿ ಸಂತೋಷ ಪರೀಟ ಕ್ಷೇತ್ರ ಮೇಲ್ವಿಚಾರಕರಾದ ವಿಷ್ಣು ಮಡಿವಾಳ ಮತ್ತು ಸಂತೋಷ ಸಿದ್ದೇಕೊಪ್ಪ ಉಪಸ್ಥಿತರಿದ್ದರು. ಈ ತರಬೇತಿಯಲ್ಲಿ 26 ಶಿಬಿರಾರ್ಥಿಗಳು ಪಾಲ್ಗೊಂಡು ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದರು, ತರಬೇತಿ ಅವಧಿಯಲ್ಲಿ ಸಾರಿ ಪೆಟ್ಟಿಕೊಟ್, ಪ್ರಾಕ್, ಸ್ಕೂಲ್ ಯುನಿಫಾರ್ಮ್, ಜಂಪರ್, ಚೂಡಿದಾರ ಹೀಗೆ ಅನೇಕ ವಿನ್ಯಾಸದ ವಸ್ತ್ರಗಳನ್ನು ಹೊಲಿಯಲು ಕಲಿತರು. ಮನಿಷಾ ಮೀರಾಶಿ ಸ್ವಾಗತಿಸಿದರು.