ಕುಮಟಾ: ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಶಾಲೆಗಳಿಗೆ ಹೆಚ್ಚಿನ ಅನುದಾನ ಹರಿದು ಬರುತ್ತಿದ್ದು, ಈಗಾಗಲೇ ತಾಲೂಕಿಗೆ 12 ಶಾಲಾ ಕೊಠಡಿಗಳು ನಿರ್ಮಾಣಗೊಂಡಿವೆ. ಆದಾಗ್ಯೂ ಕೊರೋನಾ ಹಾಗೂ ನೀತಿ ಸಂಹಿತೆಯಿಂದಾಗಿ ಕೊಠಡಿ ಉದ್ಘಾಟಣೆಗೆ ವಿಳಂಬವಾಯಿತೆಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ತಾಲೂಕಿನ ಮಿರ್ಜಾನ್ ಎಣ್ಣೆಮಡಿಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 11 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ನೂತನ ಕೊಠಡಿ ಉದ್ಘಾಟಿಸಿ ಅವರು ಮಾತನಾಡಿದರು. ಈ ಹಿಂದೆ ಬಡತನದಿಂದಾಗಿ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸಲಾಗದ ಸಂದಿಗ್ಧ ಸ್ಥಿತಿ ಎದುರಿಸುತ್ತಿದ್ದರು 1973 ರಲ್ಲಿ ಮುಖ್ಯಮಂತ್ರಿಗಳಾಗಿದ್ದ ರಾಮಕೃಷ್ಣ ಹೆಗಡೆಯವರು ಶಾಲೆಗೆ ವಿದ್ಯಾರ್ಥಿಗಳು ಕಡಿಮೆ ಇರಲು ಬಟ್ಟೆ ಕಾರಣ ಎಂಬುದನ್ನು ಮನಗೊಂಡು ಉಚಿತ ಸಮವಸ್ತ್ರ ಜಾರಿಗೆ ತಂದ ಯೋಜನೆಯನ್ನು ನೆನಪಿಸಿದರು. ಬಿಸಿಯೂಟ ಘೋಷಣೆಯಿಂದಾಗಿ ಶಾಲೆಗೆ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬರಲು ಕಾರಣವಾಯಿತೆಂದರು.
2010ನೇ ಸಾಲಿನಲ್ಲಿ ಈ ಭಾಗದಲ್ಲಿ ಉಚಿತ ವಿದ್ಯುತ್ ವ್ಯವಸ್ಥೆಯನ್ನು ನೆನಪಿಸಿದ ಶಾಸಕರು ರಸ್ತೆ ನಿರ್ಮಿಸಿದ್ದನ್ನು ಹೇಳಿಕೊಂಡರು. ಸರಕಾರಗಳು ಬಡವರ ಪರ ಕೆಲಸ ಮಾಡುತ್ತಿರುವುದನ್ನು ನೆನಪಿಸಿದರು.
ಎಸ್‌ಡಿಎಮ್‌ಸಿ ಅಧ್ಯಕ್ಷ ಜಗದೀಶ ಹಳ್ಳೇರ ಅಧ್ಯಕ್ಷತೆ ವಹಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಭಟ್, ಗ್ರಾ.ಪಂ ಅಧ್ಯಕ್ಷೆ ಕುಸುಮ ಪಡ್ತಿ, ಡಯಟ್ ಪ್ರಾಚಾರ್ಯ ಎಮ್.ಜಿ.ನಾಯಕ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ನಾಗರತ್ನ ನಾಯಕ, ಮಾದೇವಿ ಹಳ್ಳೆರ, ಮಂಗಲಾ ಹಳ್ಳೆರ, ಮಹೇಶ ನಾಯಕ, ವೀಣಾ ನಾಯಕ, ಆನಂದು ನಾಯಕ, ರಾಮು ಕೆಂಚನ್ ಮುಂತಾದವರು ಇದ್ದರು.