ಸಿದ್ದಾಪುರ: ಇಂದಿನ ಬದಲಾದ ಸ್ಥಿತಿಯಲ್ಲಿ ಪಾಲಕರು, ಶಿಕ್ಷಕರು ತಮ್ಮ ಮಕ್ಕಳು ಹೆಚ್ಚು ಅಂಕಗಳಿಸಬೇಕೆಂದು ಬಯಸಿ ಕೇವಲ ಪರೀಕ್ಷೆಗಾಗಿ ಓದಿಸುವ ಪ್ರವೃತ್ತಿ ಬೆಳೆದಿದೆ. ಇದು ತುಂಬಾ ಅಪಾಯಕಾರಿ. ಇದರ ಬದಲಿಗೆ ಮಕ್ಕಳಿಗೆ ಅಭಿರುಚಿಗೆ ತಕ್ಕಂತೆ ಜ್ಞಾನ ಗಳಿಸುವ ದೃಷ್ಟಿಯಿಂದ ಪಠ್ಯವಲ್ಲದೆ ಇತರ ಪುಸ್ತಕಗಳನ್ನೂ ಓದಿಸಿದರೆ ವಿದ್ಯಾರ್ಥಿಗಳ ಭವಿಷ್ಯ ಭದ್ರವಾಗುತ್ತದೆ. ಆದ್ದರಿಂದ ಮಕ್ಕಳನ್ನು ಅಂಕಗಳಿಕೆಗೆ ಓದಿಸದೇ ಜ್ಞಾನ ಸಂಪಾದನೆಗಾಗಿ ಓದಿಸಲು ತೊಡಗಿಸಬೇಕೆಂದು ಕ್ಷೇತ್ರಶಿಕ್ಷಣಾಧಿಕಾರಿ ಸದಾನಂದ ಸ್ವಾಮಿ ಹೇಳಿದರು.
ಅವರು ಪಟ್ಟಣದ ಹಾಳದಕಟ್ಟಾ ಸರಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ತಾಲೂಕಿನ ಕನ್ನಡ ಭಾಷಾ ಶಿಕ್ಷಕರ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಬಿ.ಆರ್.ಸಿ ಸಮನ್ವಯಾಧಿಕಾರಿ ಚೈತನ್ಯ ಕುಮಾರ ಕಲಿಕಾ ಚೇತರಿಕೆ ಅನುಷ್ಠಾನ ಕುರಿತು ಮಾತನಾಡಿದರು. ಹಾಳದಕಟ್ಟಾ ಪ್ರೌಢಶಾಲೆಯ ಮುಖ್ಯಾಧ್ಯಾಪಕರಾದ ಜಿ.ಆಯ್. ನಾಯ್ಕ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕನ್ನಡ ವಿಷಯ ಶಿಕ್ಷಕರ ವೇದಿಕೆ ಅಧ್ಯಕ್ಷ ಎಫ್.ಎನ್.ಹರನಗಿರಿ, ಉಪಾಧ್ಯಕ್ಷ ಎಮ್.ಬಿ.ನಾಯ್ಕ ವೇದಿಕೆಯಲ್ಲಿದ್ದರು. ತಾಲೂಕಿನ ಎಲ್ಲಾ ಪ್ರೌಢಶಾಲೆಯ ಕನ್ನಡ ಭಾಷಾ ಶಿಕ್ಷಕರು ಪಾಲ್ಗೊಂಡಿದ್ದರು.
ಕ್ಷಮಾ ಸಂಗಡಿಗರು ಪ್ರಾರ್ಥಿಸಿದರೆ, ಶಿಕ್ಷಕ ನಿತ್ಯಾನಂದ ಹೆಗಡೆ ಸ್ವಾಗತಿಸಿದರು. ಕನ್ನಡ ಶಿಕ್ಷಕಿ ಗೀತಾ ಬಿ.ಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.