ಕುಮಟಾ: ಪಿಎಂಎಸ್‌ವಿ ನಿಧಿ ಘಟಕದಡಿ ಬೀದಿ ವ್ಯಾಪಾರಿಗಳಿಗೆ ಸಾಲ ಪತ್ರ ಮತ್ತು ವಸತಿ ಯೋಜನೆಯಡಿ ಮನೆ ಮಂಜೂರಾದ ಫಲಾನುಭವಿಗಳಿಗೆ ಶಾಸಕ ದಿನಕರ ಶೆಟ್ಟಿ ಅವರು ಕಾಮಗಾರಿ ಆದೇಶ ಪತ್ರವನ್ನು ವಿತರಿಸಿದರು.
ಕುಮಟಾ ಪುರಸಭೆ ವತಿಯಿಂದ ಪಟ್ಟಣದ ಹಳೇ ಮೀನು ಮಾರುಕಟ್ಟೆಯ ಸಮುದಾಯ ಭವನದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶಾಸಕರು ಮಾತನಾಡಿ, ಆಶ್ರಯ ಮನೆ ಯೋಜನೆಯ ಆದೇಶ ಪತ್ರ ನೀಡಲು ಬಹಳ ವಿಳಂಬವಾಗಿದೆ. ಅದಕ್ಕೆ ಕಾರಣ ಎರಡು ವರ್ಷ ನೆರೆ ಹಾವಳಿ, ಕೋವಿಡ್‌ನಿಂದ ಸರ್ಕಾರಕ್ಕೆ ಆರ್ಥಿಕ ಹೊರೆ ಉಂಟಾಯಿತು ಎಂದರು.
ಇದಲ್ಲದೇ ಹಿಂದಿನ ಸರ್ಕಾರ ಕೊನೆ ಗಳಿಗೆಯಲ್ಲಿ 2 ಲಕ್ಷ ಮನೆ ಮಂಜೂರಿ ಮಾಡಿತು. ಅದಕ್ಕೆ ಹಣ ಹೊಂದಿಸಿಕೊಡುವ ಜವಾಬ್ದಾರಿ ನಮ್ಮ ಸರ್ಕಾರದ ಮೇಲೆ ಬಿತ್ತು. ಇದರಿಂದ ಹೊಸಬರಿಗೆ ಮನೆ ಮಂಜೂರಿ ಮಾಡಲು ಸಮಸ್ಯೆಯಾಯಿತು. ಆದರೂ ಈಗ ಮನೆ ಮಂಜೂರಿಯಾದವರಿಗೆ ಆದೇಶ ಪತ್ರ ನೀಡಿದ್ದೇವೆ, ಪುರಸಭೆಯ ರಸ್ತೆಯ ಅಭಿವೃದ್ಧಿಗೆ 5 ಕೋಟಿ ವಿಶೇಷ ಅನುದಾನ ತಂದಿದ್ದೇನೆ. ಮತ್ತೆ 3 ಕೋಟಿ ತರಿಸಿದ್ದೇನೆ. ಈಗ 10 ಕೋಟಿ ನೀಡಲು ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಿದ್ದೇನೆ ಎಂದರು.
ಪುರಸಭೆ ಮುಖ್ಯಾಧಿಕಾರಿ ಅವರು ಮಾತನಾಡಿ, ಆಶ್ರಯ ಮನೆ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ಅನುರಾಧಾ ಬಾಳೇರಿ, ಉಪಾಧ್ಯಕ್ಷೆ ಸುಮತಿ ಭಟ್, ಸ್ಥಾಯಿ ಸಮಿತಿ ಚೇರಮೆನ್ ಸುಶೀಲಾ ಗೋವಿಂದ ನಾಯ್ಕ, ಸದಸ್ಯರಾದ ಮೋಹಿನಿ ಗೌಡ, ಗೀತಾ ಮುಕ್ರಿ, ಶೈಲಾ ಗೌಡ, ಸಮುದಾಯ ಸಂಘಟಕಿ ಮೀನಾಕ್ಷಿ ಆಚಾರಿ ಇತರರು ಇದ್ದರು.