ಭಟ್ಕಳ: ಸತತವಾಗಿ ಸುರಿದ ಭಾರಿ ಗಾಳಿ ಮಳೆಗೆ ತಾಲೂಕಿನ ಎರಡು ತೀರಾ ಬಡ ಕುಟುಂಬದವರ ಮನೆಯ ಮೇಲೆ ಮರಬಿದ್ದು ಹಾನಿ ಉಂಟಾದ . ಸಂತ್ರಸ್ತರ ಮನೆಗೆ ಶಾಸಕ ಸುನೀಲ ನಾಯ್ಕ ಭೇಟಿ ನೀಡಿ ಸರಕಾರದಿಂದ ಪರಿಹಾರದ ಆದೇಶ ಪ್ರತಿ ಹಸ್ತಾಂತರಿಸಿದರು.
ಜುಲೈ 5ರಂದು ಸುರಿದ ಗಾಳಿ ಮಳೆಗೆ ಶಿರಾಲಿಯ ವೆಂಕಟರಮಣ ನಾಯ್ಕ ಹಾಗೂ ಮಾವಳ್ಳಿ-2 ಚಂದ್ರಹಿತ್ಲು ನಿವಾಸಿ ಲಕ್ಷ್ಮಿ ನಾಯ್ಕ ಎಂಬುವವರ ಮನೆಗೆ ಭಾರಿ ಹಾನಿ ಸಂಭವಿಸಿತ್ತು. ಘಟನೆಯ ಬಗ್ಗೆ ತಿಳಿದು ಘಟನೆಯ ದಿನದಂದು ಇಬ್ಬರೂ ಸಂತ್ರಸ್ತರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಶಾಸಕ ಸುನೀಲ ನಾಯ್ಕ ವೈಯಕ್ತಿಕ ನೆರವನ್ನೂ ನೀಡಿದ್ದರು. ಸರಕಾರದಿಂದ ಅಧಿಕ ಪರಿಹಾರ ಒದಗಿಸಿಕೊಡುವ ಭರವಸೆ ನೀಡಿ ಕುಟುಂಬಕ್ಕೆ ಸಾಂತ್ವನ ನೀಡಿದ್ದರು.
ಅದರಂತೆ ಶುಕ್ರವಾರದಂದು ಸರ್ಕಾರದಿಂದ ಸಾಧ್ಯವಾಗದಷ್ಟು ಹೆಚ್ಚಿನ ಪರಿಹಾರವನ್ನು ದೊರಕಿಸಿಕೊಟ್ಟಿದ್ದು, ಸಂತ್ರಸ್ತರ ಸಮಸ್ಯೆಗೆ ಸರಕಾರ ಹಾಗೂ ಶಾಸಕ ಸುನೀಲ ನಾಯ್ಕ ಶೀಘ್ರ ಸ್ಪಂದನೆ ನೀಡಿ ಆದೇಶ ಪ್ರತಿಯನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದರು. ಎರಡು ಕುಟುಂಬಕ್ಕೆ ತಲಾ ರೂ.95,100 ರೂಪಾಯಿ ಪರಿಹಾರ ಆದೇಶ ಪ್ರತಿಯನ್ನು ನೀಡಲಾಗಿದೆ.
ಈ ಸಂದರ್ಭದಲ್ಲಿ ಮಾವಳ್ಳಿ-2 ಪಂಚಾಯತಿ ಅಧ್ಯಕ್ಷ ಮಹೇಶ ನಾಯ್ಕ, ಪಂಚಾಯತಿ ಸದಸ್ಯ ಕಿರಣ ನಾಯ್ಕ, ಮಾರುತಿ ನಾಯ್ಕ, ಶಾಸಕರ ಖಾಸಗಿ ಆಪ್ತ ಕಾರ್ಯದರ್ಶಿ ಪ್ರಮೋದ ಜೋಶಿ ಮುಂತಾದವರು ಇದ್ದರು.