ಶಿರಸಿ: ಅವನು ಬಂದನು,ಇವನು ಹೋದನು ಎಂದರೆ ಯಕ್ಷಗಾನ ಪದ್ಯ ಆಗುವದಿಲ್ಲ. ಯಕ್ಷಗಾನ ಪದ್ಯ ಅರ್ಥದಾರಿಗಳಿಗೆ ಅರ್ಥ ವಿಸ್ತರಿಸಿ ಹೇಳುವಷ್ಟು ಇರಬೇಕು. ಜನ ಕೀಳುಮಟ್ಟದ ಅಭಿರುಚಿ ಅಪೇಕ್ಷಿಸಿದರೆ ಕವಿಗಳು, ಮೇಳಗಳು ಈಡಾಗಬಾರದು ಎಂದು ಡಾ. ಕಬ್ಬಿನಾಲೆ ವಸಂತ ಭಾರದ್ವಜ ಪ್ರತಿಪಾದಿಸಿದರು.
ನಗರದ ಟಿಆರ್ಸಿ ಸಭಾಂಗಣದಲ್ಲಿ ಶನಿವಾರ ಯಕ್ಷ ಶಾಲ್ಮಲಾ ಸ್ವರ್ಣವಲ್ಲೀ, ದಿ.ಎಂ.ಎ.ಹೆಗಡೆ ಸಂಸ್ಮರಣ ಸಮಿತಿ ಹಮ್ಮಿಕೊಂಡ ಪ್ರೋ.ಎಂ.ಎ.ಹೆಗಡೆ ಸಂಸ್ಮರಣ ಕಾರ್ಯಕ್ರಮದಲ್ಲಿ ಎಂ.ಎ.ಹೆಗಡೆ ಯಕ್ಷಗಾನ ಪ್ರಸಂಗಗಳ ಕುರಿತು ನಡೆದ ಪ್ರಥಮ ಗೋಷ್ಠಿಯಲ್ಲಿ ಎಂ.ಎ.ಹೆಗಡೆ ಅವರ ರಾಜಾ ಕರಂಧಮದ ಕುರಿತು ಮಾತನಾಡಿದರು.
ಯಕ್ಷಗಾನ ಕಲಾವಿದರು ಪದ್ಯದ ಸಾಹಿತ್ಯ ಬಿಟ್ಟು ಕೇವಲ ಭಾವ ಹೇಳಬಾರದು. ಹಾಗೆ ಮಾಡಿದರೆ ಕವಿಗೆ ನಷ್ಟವಾಗುತ್ತದೆ ಎಂದರು. ಯಕ್ಷಗಾನ ಕಲಾವಿದರು ಸಾಹಿತ್ಯ ಅಧ್ಯಯನ ಮಾಡಬೇಕು. ಕಲಾವಿದರು ಕನ್ನಡ ನಿಘಂಟು ಇಟ್ಟುಕೊಳ್ಳಬೇಕು. ಇಲ್ಲವಾದರೆ ಸಾಹಿತ್ಯ ಅಭಿಮಾನಕ್ಕೆ ಗೌರವ ತರುವಂಥದ್ದಲ್ಲ ಎಂದೂ ಪ್ರತಿಪಾದಿಸಿದ ಅವರು, ಯಕ್ಷಗಾನ ಸಾಹಿತ್ಯವನ್ನೂ ವಾಚಿಸುವ ಕಾರ್ಯ ಆಗಬೇಕು. ಪದ್ಯಗಳ ವಾಚನದ ರೂಢಿ ಬೆಳಸಿಕೊಳ್ಳಬೇಕು. ಎಂ.ಎ.ಹೆಗಡೆ ಅವರ ಪದ್ಯಗಳಲ್ಲಿ ಕಾವ್ಯ ಗುಣ ಅಪರೂಪದದ್ದು ಎಂದರು.
ಸೀತಾ ವೀಯೋಗದ ಕುರಿತು ಮಾತನಾಡಿದ ಪ್ರೋ.ಕೆ.ಈ.ರಾಧಾಕೃಷ್ಣ, ಕರುಣಾ ರಸ ದೊಡ್ಡದು ಎನ್ನುವವರು ಇದ್ದಾರೆ.ಆದರೆ, ಎಲ್ಲ ರಸಕ್ಕಿಂತ ಆತ್ಮರಸ ದೊಡ್ಡದು. ಸೀತಾ ವಿಯೋಗ ಈ ಆತ್ಮ ರಸ ವ್ಯಾಪಕವಾಗಿದೆ ಎಂದರು.
ಯಕ್ಷಗಾನದ ಕಿರು ಪ್ರಸಂಗಗಳ ಮಾತನಾಡಿದ ಡಾ. ಪಾದೇಕಲ್ಲು ವಿಷ್ಣು ಭಟ್ಟ, ಯಕ್ಷಗಾನದ ಶ್ರೇಷ್ಠ ಕವಿಗಳು ಎಂದರು. ಅಧ್ಯಕ್ಷತೆಯನ್ನು ತಾಳಮದ್ದಲೆ ಅರ್ಥದಾರಿ ಎಂ.ಎನ್.ಹೆಗಡೆ ಹಲವಳ್ಳಿ, ಯಕ್ಷಗಾನ ಪ್ರಸಂಗ ಬರೆದು ಕೊಟ್ಟರೆ ಮಗಳು ಮದುವೆ ಮಾಡಿದಂತೆ. ಯಾರ ಮಗಳು ಎಂದು ಹೇಳುವುದಿಲ್ಲ ಎಂದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಎಪಿಎಂಸಿ ಅಧ್ಯಕ್ಷ ಪ್ರಶಾಂತ ಗೌಡರು ಮಾತನಾಡಿ, ಯಕ್ಷಗಾನದ ಮೂಲಕ ರಾಮಾಯಣ ಮಹಾಭಾರತ ಅರಿತಿದ್ದು ಎಂಬುದು ಮುಖ್ಯವಾಗಿದೆ ಎಂದರು.
ವೇದಾಂತ ಗ್ರಂಥಗಳು: ಕನ್ನಡ ಭಾಷಾಂತರ ಎರಡನೇ ಗೋಷ್ಟಿಯಲ್ಲಿ ಎಂ.ಎ.ಹೆಗಡೆ ಅವರ ಇಂಗ್ಲೀಷ ಕೃತಿಗಳ ಕುರಿತು ಡಾ. ಎಚ್.ಆರ್.ಅಮರನಾಥ, ವೇದಾಂತ ಗ್ರಂಥಗಳ ಕುರಿತು ಡಾ. ಮಹಾಬಲೇಶ್ವರ ಭಟ್ಟಕಿರಕುಂಭತ್ತಿ ಮಾತನಾಡಿದರು.
ಅಧ್ಯಕ್ಷತೆಯನ್ನು ನಿವೃತ್ತ ವಾಣಿಜ್ಯ ಅಧಿಕಾರಿ ಎಸ್.ಎಂ.ಹೆಗಡೆ ಬಣಗಿ ವಹಿಸಿ ಎಂ.ಎ.ಹೆಗಡೆ ಅವರ ಕೃತಿಗಳು ನಮ್ಮ ಮುಂದೆ ಸದಾ ಅವರನ್ನು ಉಳಿಸಿದೆ ಎಂದರು.
ಸಂಸ್ಮರಣ ಸಮಿತಿ ಕಾರ್ಯಾಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಎಂ.ಎ.ಹೆಗಡೆ ಅವರ ಶ್ರೀಮತಿ ಸಾವಿತ್ರಿ ಎಂ.ಹೆಗಡೆ ವೇದಿಕೆಯಲ್ಲಿ ಇದ್ದರು.
ಗಜಾನನ ಭಟ್ಟ ತುಳಗೇರಿ, ಶಂಕರ ಭಾಗವತ ಯಲ್ಲಾಪುರ ಪ್ರಾರ್ಥಿಸಿದರು. ಯಕ್ಷಶಾಲ್ಮಲಾದ ಕಾರ್ಯಾಧ್ಯಕ್ಷ ಆರ್.ಎಸ್.ಹೆಗಡೆ ಭೈರುಂಬೆ, ಸುಬ್ರಾಯ ಕೆರೆಕೊಪ್ಪ ಸ್ವಾಗತಿಸಿದರು. ಸಂಚಾಲಕ ನಾಗರಾಜ ಜೋಶಿ ಸೋಂದಾ ಪ್ರಾಸ್ತಾವಿಕ ಮಾತನಾಡಿದರು. ಪತ್ರಕರ್ತ ರಾಘವೇಂದ್ರ ಬೆಟ್ಟಕೊಪ್ಪ, ಯಕ್ಷ ಶಾಲ್ಮಲಾದ ಜಿ.ಜಿ.ಹೆಗಡೆ ನಿರ್ವಹಿಸಿದರು.