ಹೊನ್ನಾವರ: ನಿಕ್ಷಯ ಪೋಷಣ ಯೋಜನೆ ಅಡಿಯಲ್ಲಿ ಕ್ಷಯ ರೋಗದ ಚಿಕಿತ್ಸೆ ಪಡೆಯುತ್ತಿರುವ ಐದು ಮಕ್ಕಳನ್ನು ಸೃಷ್ಟಿ ಸಮಾಜ ಸೇವಾ ಸಂಸ್ಥೆ ದತ್ತು ಪಡೆದಿದ್ದು, ಮಕ್ಕಳ ಚಿಕಿತ್ಸೆ ಸಂಪೂರ್ಣವಾಗುವವರೆಗೂ ಪೌಷ್ಠಿಕಾಂಶದ ಜವಾಬ್ದಾರಿಯನ್ನು ಹೊತ್ತುಕೊಂಡಿದೆ.
ಕ್ಷಯ ರೋಗದ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳಿಗೆ ಹೆಚ್ಚಿನ ಪೌಷ್ಠಿಕಾಂಶ ಆಹಾರದ ಅವಶ್ಯಕತೆ ಇರುತ್ತದೆ. ಇದನ್ನು ಹೋಗಲಾಡಿಸಲು ಆರೋಗ್ಯ ಇಲಾಖೆ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು ನಿಕ್ಷಯ ಪೋಷಣ ಯೋಜನೆ ಅಡಿಯಲ್ಲಿ ಸಂಘ- ಸಂಸ್ಥೆಗಳು, ದಾನಿಗಳು, ಕ್ಷಯ ರೋಗಿಗಳ ಪೌಷ್ಠಿಕಾಂಶ ಆಹಾರದ ಖರ್ಚು- ವೆಚ್ಚಗಳನ್ನು ಭರಿಸಬಹುದಾಗಿದೆ. ಹೊನ್ನಾವರ- ಭಟ್ಕಳ ವಿಭಾಗದ ಕ್ಷಯ ರೋಗ ಮೇಲ್ವಿಚಾರಕ ರಾಜಶೇಖರ ಅವರ ಮನವಿಗೆ ಸ್ಪಂದಿಸಿದ ಸೃಷ್ಟಿ ಸಮಾಜ ಸೇವಾ ಸಂಸ್ಥೆ, ಐದು ಮಕ್ಕಳ ಕ್ಷಯ ರೋಗ ಚಿಕಿತ್ಸೆ ಪೂರ್ಣವಾಗುವವರೆಗಿನ ಪೌಷ್ಠಿಕಾಂಶವನ್ನು ನೀಡಲು ಮುಂದೆ ಬಂದಿದೆ.
ಅದರಂತೆ ಮೊದಲ ಹಂತವಾಗಿ ಸೃಷ್ಟಿ ಸಮಾಜ ಸೇವಾ ಸಂಸ್ಥೆ ನೀಡಿದ ಎರಡು ತಿಂಗಳ ಪೌಷ್ಠಿಕಾಂಶ ಪೌಡರ್ ಡಬ್ಬಗಳ ಜೊತೆಗೆ ನೋಟ್‌ಬುಕ್, ಪೆನ್ ಸೆಟ್, ಪೆನ್ಸಿಲ್ ಒಳಗೊಂಡ ಕಿಟ್‌ಗಳನ್ನು ತಾಲೂಕು ಆಸ್ಪತ್ರೆಯ ಆಡಳಿತ ವ್ಯೆದ್ಯಾಧಿಕಾರಿ ಡಾ.ರಾಜೇಶ ಕಿಣಿ, ಕ್ಷಯ ರೋಗ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೇಲ್ವಿಚಾರಕ ರಾಜಶೇಖರ ನಾಯ್ಕ, ಪ್ರವೀಣ ಕದಂ ಅವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಇಂತಹ ಉತ್ತಮ ಯೋಜನೆಗೆ ಸಂಘ- ಸಂಸ್ಥೆಗಳು, ದಾನಿಗಳು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬಂದು ಕೈಜೋಡಿಸಬೇಕು ಎಂದು ಡಾ.ರಾಜೇಶ ಕಿಣಿ ಹೇಳಿದರು. ಕಾರ್ಯಕ್ರಮದಲ್ಲಿ ಆಯುಷ್ ವೈದ್ಯಾಧಿಕಾರಿ ಡಾ.ಗುರುದತ್ತ ಕುಲಕರ್ಣಿ, ಸರಕಾರಿ ನೌಕರರ ಸಂಘದ ತಾಲೂಕು ಶಾಖೆಯ ಉಪಾಧ್ಯಕ್ಷ ಚಂದ್ರಶೇಖರ ಕಳಸ, ಐಸಿಟಿಸಿ ಆಪ್ತಸಮಾಲೋಚಕ ವಿನಾಯಕ, ಪ್ರಯೋಗಶಾಲಾ ತಂತ್ರಜ್ಞ ಉಮೇಶ ಇದ್ದರು.