ಶಿರಸಿ: ಶಿರಸಿಗೆ ತಹಶೀಲ್ದಾರ್ ನೇಮಕ ಆಗಬೇಕೆಂದು ಆಗ್ರಹಿಸಿ ಸೋಮವಾರ ಕಾರವಾರದಲ್ಲಿ ಬಿಜೆಪಿ ಗ್ರಾಮೀಣ ಮಂಡಲ ಮತ್ತು ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಕಾರವಾರ ಚಲೋಕ್ಕೆ ವಿಜಯ ದೊರಕಿದ್ದು, ಜಿಲ್ಲಾಧಿಕಾರಿಗಳು ಸ್ಥಳದಲ್ಲಿಯೇ (23-06-2025) ಜಾರಿಯಾಗುವಂತೆ, ಶಿರಸಿಯ ಉಪ ತಹಶೀಲ್ದಾರ್ ಆಗಿದ್ದ ರಮೇಶ ಹೆಗಡೆ ಅವರನ್ನು, ಸೋಮವಾರದಿಂದಲೇ ಅನ್ವಯವಾಗುವಂತೆ ತಹಶೀಲ್ದಾರ್ ಗ್ರೇಡ್ 1 ಹೆಚ್ಚುವರಿ ಪ್ರಭಾರಿಯಾಗಿ ನೇಮಕ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದಾರೆ.
ಕಳೆದ ನಾಲ್ಕು ತಿಂಗಳಿಂದ ಶಿರಸಿಗೆ ಖಾಯಂ ತಹಶೀಲ್ದಾರ್ ಇಲ್ಲದೇ ಜನಸಾಮಾನ್ಯರಿಗೆ ಅತೀವ ತೊಂದರೆಯಾಗಿತ್ತು. ಈ ಹಿನ್ನೆಲೆಯಲ್ಲಿ ಸಾಮಾಜಿಕ ಹೋರಾಟಗಾರ, ಬಿಜೆಪಿ ರೈತಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ ಕಳೆದ ಮೇ19 ರಂದೇ ಶಿರಸಿಯಲ್ಲಿ ಸಹಾಯಕ ಆಯುಕ್ತರಿಗೆ ಮನವಿ ನೀಡಿ, ಪ್ರತಿಭಟನೆಯ ಎಚ್ಚರಿಕೆಯನ್ನು ನೀಡಿದ್ದರು. ಮತ್ತು ಸಮಯಾವಕಾಶವನ್ನೂ ನೀಡಿದ್ದರು. ಆದರೆ ಅದಾಗಿ ತಿಂಗಳು ಕಳೆದರೂ ತಹಶೀಲ್ದಾರ್ ನೇಮಕಾತಿ ವಿಚಾರ ನಡೆಯದ ಕಾರಣ, ಬಿಜೆಪಿ ಗ್ರಾಮೀಣ ಮಂಡಲದ ವತಿಯಿಂದ ಸೋಮವಾರ ‘ಕಾರವಾರ ಚಲೋ’ ಹೋರಾಟವನ್ನು ಕೈಗೆತ್ತಿಕೊಂಡಿದ್ದರು.
ಈ ವೇಳೆ ಶಿರಸಿ ಗ್ರಾಮೀಣ ಮಂಡಲ ಅಧ್ಯಕ್ಷೆ ಉಷಾ ಹೆಗಡೆ ಮಾತನಾಡಿ, ವಿಸ್ತಾರವಾಗಿರುವ ಶಿರಸಿ ತಾಲೂಕಿಗೆ ನಾಲ್ಕು ತಿಂಗಳಿಂದ ದಂಡಾಧಿಕಾರಿ ಇಲ್ಲದಿರುವುದರಿಂದ ಜನಸಾಮಾನ್ಯರಿಗೆ, ಶಾಲಾ ಮಕ್ಕಳಿಗೆ , ಬಡವರಿಗೆ ಅತೀವ ತೊಂದರೆಯಾಗುತ್ತಿದೆ. ಸ್ಥಳೀಯ ಶಾಸಕರಿಗೆ ಇದ್ಯಾವುದರ ಅರಿವೇ ಇಲ್ಲ. ಜನರಿಗೆ ಜನನ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ ಸೇರಿದಂತೆ ಎಲ್ಲ ದಾಖಲಾತಿಗಳ ಪಡೆಯಲು ಜನರು ಹೈರಾಣಾಗುತ್ತಿದ್ದಾರೆ. ಕಣ್ಣು-ಕಿವಿ-ಬಾಯಿ ಇಲ್ಲದ ಕುರುಡು ಸರಕಾರ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವಾಗಿದೆ. ಈ ಕೂಡಲೇ ಶಿರಸಿಗೆ ಖಾಯಂ ತಹಶೀಲ್ದಾರ್ ಅವರನ್ನು ನೇಮಕ ಮಾಡಲು ಸರಕಾರವನ್ನು ಅವರು ಒತ್ತಾಯಿಸಿದರು.
ಬಿಜೆಪಿ ರೈತಮೋರ್ಚಾ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ ಮಾತನಾಡಿ, ಈ ಭ್ರಷ್ಟ ಕಾಂಗ್ರೆಸ್ ಸರಕಾರದಲ್ಲಿ ಜನಸಾಮಾನ್ಯರ ಸಮಸ್ಯೆಗಳಿಗೆ ಬೆಲೆನೇ ಇಲ್ಲದಂತಾಗಿದೆ. ಅತಿ ದೊಡ್ಡ ತಾಲೂಕು ಕ್ಷೇತ್ರವಾಗಿರುವ ಶಿರಸಿಗೆ ನಾಲ್ಕು ತಿಂಗಳಿಂದ ತಹಶೀಲ್ದಾರ್ ಇಲ್ಲದಿರುವುದು ಅತಿದೊಡ್ಡ ಸಮಸ್ಯೆಯಾಗಿದೆ. ಕೇವಲ ತಹಸೀಲ್ದಾರ್ ಮಾತ್ರ ಅಲ್ಲದೆ ಎಸಿಯು ಪ್ರಭಾರಿಯಾಗಿದ್ದು ಜನರಿಗೆ ವಾರದಲ್ಲಿ 2 ದಿನ ಮಾತ್ರ ಲಭ್ಯರಿರುತ್ತಾರೆ. ಇದರಿಂದಾಗಿ ಜನರು ಸಮಸ್ಯೆ ಅನುಭವಿಸುವಂತಾಗಿದೆ. ಬೆಳಗ್ಗಿನಿಂದ ಸಂಜೆ ತನಕ ತಹಸೀಲ್ದಾರ್ ಕಚೇರಿ ಎದುರು ಕಾದು ಕೊನೆಗೂ ತಹಸೀಲ್ದಾರ್ ಭೇಟಿಯಾಗಲಾರದೆ ಸಮಸ್ಯೆಯನ್ನು ಪರಿಹರಿಸಿಕೊಳ್ಳದೆ ಕಣ್ಣೀರು ಹಾಕಿ ಹೋಗುವ ಸ್ಥಿತಿ ಇದೆ. ಈ ರೀತಿ ಜನರ ಕಣ್ಣಲ್ಲಿ ಕಣ್ಣೀರು ಹಾಕಿಸುವುದು ಶಾಸಕರಾದ ಭೀಮಣ್ಣನವರ ಸ್ಥಾನಕ್ಕೆ ಶೋಭೆ ತರುತ್ತದೆಯೇ ? ಎಂದು ಅವರು ಪ್ರಶ್ನಿಸಿದರು.
ಬಿಜೆಪಿ ರೈತಮೋರ್ಚಾ ಜಿಲ್ಲಾಧ್ಯಕ್ಷ ರಮೇಶ ನಾಯ್ಕ ಕುಪ್ಪಳ್ಳಿ ಮಾತನಾಡಿ, ಕಳೆದ 4 ತಿಂಗಳಿಂದ ಶಿರಸಿಗೆ ತಹಶೀಲ್ದಾರ್ ಇಲ್ಲದೆ ಸಮಸ್ಯೆ ಆಗಿದೆ. ಮಾನ್ಸೂನ್ ಆರಂಭವಾಗಿ ಅದಾಗಲೇ 1 ತಿಂಗಳಾಗುತ್ತ ಬಂದಿದೆ. ಭಾಶಿ ಹಾಗೂ ಚಿಗಳ್ಳಿ ಭಾಗದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಇನ್ನು ಒಂದೆರಡು ದಿನ ಮಳೆ ಮುಂದುವರೆದರೆ ಅನಾಹುತಗಳಾಗುತ್ತವೆ. ಇಂತಹ ಸಂದರ್ಭದಲ್ಲಿ ಖಾಯಂ ತಹಸೀಲ್ದಾರ್ ಇಲ್ಲ. ಈ ಕೂಡಲೇ ತಹಶೀಲ್ದಾರ್ ನೇಮಕ ಮಾಡಬೇಕೆಂದು ಆಗ್ರಹಿಸಿದರು.
ಮತ್ತೀಘಟ್ಟ ಗ್ರಾಪಂ ಸದಸ್ಯ ನಾರಾಯಣ ಹೆಗಡೆ ಮಾತನಾಡಿ, ಕಾಂಗ್ರೆಸ್ ಸರಕಾರದಲ್ಲಿ ಜನರು ಕಣ್ಣು ಮುಚ್ಚಿ ನಿದ್ರೆ ಮಾಡುವಂತಿಲ್ಲವಾಗಿದೆ. ಮತ್ತೀಘಟ್ಟ ರಸ್ತೆ ಸಮಸ್ಯೆಯ ವಿಚಾರದಲ್ಲಿಯೂ ನಮ್ಮ ಹೋರಾಟದ ಫಲವಾಗಿ ಇದೀಗ ಕೆಲಸ ನಡೆಯುತ್ತಿದೆ. ಸರಕಾರ ಜನರ ಕುಂದು-ಕೊರತೆಗಳನ್ನು ಆಲಿಸಿ ಪರಿಹರಿಸಬೇಕು ಎಂದರು.
ಬಿಜೆಪಿ ಗ್ರಾಮೀಣ ಮಂಡಲದ ವತಿಯಿಂದ ಹಮ್ಮಿಕೊಂಡಿದ್ದ ಈ ಕಾರವಾರ ಚಲೋ ಹೋರಾಟದಲ್ಲಿ ಬಿಜೆಪಿ ಪ್ರಮುಖರಾದ ನಾರಾಯಣ ಹೆಗಡೆ ಮತ್ತೀಘಟ್ಟ, ಚಂದ್ರಶೇಖರ ಹೆಗಡೆ, ದಾಸನಕೊಪ್ಪಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮಂಜುನಾಥ ಪಾಟೀಲ್ ದಾಸನಕೊಪ್ಪ, ರವಿ ದೇವಾಡಿಗ, ನಿರ್ಮಲಾ ಶೆಟ್ಟಿ ಸೇರಿದಂತೆ ಐವತ್ತಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿಯಾಗಿದ್ದರು.
ಕಳೆದ ಒಂದು ತಿಂಗಳಿನಿಂದ ಶಿರಸಿಗೆ ಪೂರ್ಣ ಪ್ರಮಾಣದ ತಹಸೀಲ್ದಾರ್ ನೇಮಕಕ್ಕೆ ಬಿಜೆಪಿ ಗ್ರಾಮೀಣ ಮಂಡಲ ವತಿಯಿಂದ ಆಗ್ರಹಿಸುತ್ತಲೇ ಬಂದಿದ್ದೇವೆ. ಇದೀಗ ನಮ್ಮ ಹೋರಾಟಕ್ಕೆ ಸಂಪೂರ್ಣ ಜಯ ಸಿಕ್ಕಿದ್ದು ಗ್ರೇಡ್ ೨ ತಹಸೀಲ್ದಾರ್ ಆದ ರಮೇಶ್ ಹೆಗಡೆ ಅವರನ್ನು ಇವತ್ತಿನಿಂದಲೇ ತಹಶೀಲ್ದಾರ್ ಗ್ರೇಡ್ 1 ಹೆಚ್ಚುವರಿ ಪ್ರಭಾರಿಯಾಗಿ ನೇಮಕ ಮಾಡಿ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ. ನಮ್ಮ ಹೋರಾಟಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳಿಗೆ ನಾವು ಹ್ರತ್ಪೂರ್ವಕ ಧನ್ಯವಾದ ಸಲ್ಲಿಸುತ್ತೇವೆ. ಶಿರಸಿಯವರನ್ನೇ ಹೆಚ್ಚುವರಿ ತಹಶೀಲ್ದಾರ್ ಆದೇಶ ಮಾಡಿದ್ದರಿಂದ ಇದೀಗ ಜನರಿಗೆ ಪೂರ್ಣ ಪ್ರಮಾಣದಲ್ಲಿ ತಹಶೀಲ್ದಾರ್ ಸೇವೆ ದೊರೆಯುವಂತಾಗಿದೆ.– ಅನಂತಮೂರ್ತಿ ಹೆಗಡೆ, ಜಿಲ್ಲಾ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ
ಅನಂತಮೂರ್ತಿ ಹೆಗಡೆ ಅವರ ನೇತೃತ್ವದಲ್ಲಿ ಹಾಗು ನಮ್ಮ ಬಿಜೆಪಿಯ ಗ್ರಾಮೀಣ ಮಂಡಲದ ವತಿಯಿಂದ ಈ ಕಾರವಾರ ಚಲೋ ಹೋರಾಟಕ್ಕೆ ಜಿಲ್ಲಾಧಿಕಾರಿಗಳು ಸ್ಥಳದಲ್ಲಿ ಸ್ಪಂದಿಸಿ, ಹೆಚ್ಚುವರಿ ತಹಶೀಲ್ದಾರ್ ಅವರಿಗೆ ನೇಮಕ ಮಾಡಿ ಆದೇಶ ಪತ್ರ ನೀಡಿರುವುದು ಸಂತಸದ ವಿಷಯವಾಗಿದೆ.
— ಉಷಾ ಹೆಗಡೆ, ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷೆ
ಹೋರಾಟಗಾರರ ಮನವಿಯನ್ನು ಸ್ವೀಕರಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಶಿರಸಿಗೆ ಕಾಯಂ ತಹಶೀಲ್ದಾರ್ ನೇಮಕಕ್ಕೆ ಸರಕಾರ ಮಟ್ಟದಲ್ಲಿ ಕೆಲಸ ನಡೆಯುತ್ತಿದೆ. ಸದ್ಯದಲ್ಲಿಯೇ ಖಾಯಂ ತಹಶೀಲ್ದಾರ್ ನೇಮಕವಾಗುತ್ತದೆ. ಅಲ್ಲಿಯವರೆಗೆ ಶಿರಸಿಯ ಗ್ರೇಡ್ 2 ತಹಶೀಲ್ದಾರ್ ಆಗಿರುವ ರಮೇಶ ಹೆಗಡೆ ಅವರನ್ನು ಗ್ರೇಡ್ 1 ಹೆಚ್ಚುವರಿ ತಹಶೀಲ್ದಾರ್ ಆಗಿ ನೇಮಕ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದಾರೆ. ಉತ್ತರ ಕನ್ನಡ ಜಿಲ್ಲಾಡಳಿತ ಜನರೊಂದಿಗೆ ಸದಾ ಇರುತ್ತದೆ ಎಂದು ಹೆಚ್ಚುವರಿ ತಹಶೀಲ್ದಾರ್ ನೇಮಕದ ಆದೇಶದ ಪ್ರತಿಯನ್ನು ಸಾಂಕೇತಿಕವಾಗಿ ನೀಡಿದರು.