ಜಿಲ್ಲಾ ಮಟ್ಟದ ಜನ ಸ್ಪಂದನ ಕಾರ್ಯಕ್ರಮದಲ್ಲಿ 104 ಅರ್ಜಿಗಳ ವಿಚಾರಣೆ
ಭಟ್ಕಳ: ಭಟ್ಕಳದ ನ್ಯೂ ಇಂಗ್ಲಿಷ್ ಸ್ಕೂಲ್ನ ಕಮಲಾವತಿ ಶ್ಯಾನುಭೋಗ ಸಭಾ ಭವನದಲ್ಲಿ ಶನಿವಾರ, ಮೀನುಗಾರಿಕೆ ಹಾಗೂ ಒಳನಾಡು ಜಲಸಾರಿಗೆ ಸಚಿವರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದ ಜನ ಸ್ಪಂದನ ಕಾರ್ಯಕ್ರಮದಲ್ಲಿ 104 ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಎಲ್ಲಾ ಅರ್ಜಿಗಳನ್ನು ಕಾಲಮಿತಿಯಲ್ಲಿ ಬಗೆಹರಿಸುವಂತೆ ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಎಂಡೋಸಲ್ಫಾನ್ ಪೀಡಿತರಿಗೆ ಖಾಸಗಿ ಸಂಸ್ಥೆಯ ವತಿಯಿಂದ ನಿಯಮಿತವಾಗಿ ಔಷಧಗಳು ದೊರೆಯುತ್ತಿಲ್ಲ ಎಂದ ಸಮಸ್ಯೆಯ ಕುರಿತಂತೆ ಮಾತನಾಡಿದ ಸಚಿವರು, ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಪೀಡಿತರನ್ನು ಗುರುತಿಸಿ, ಅವರಿಗೆ ವಿಶೇಷ ಶಿಬಿರಗಳನ್ನು ಮಾಡಿ ಚಿಕಿತ್ಸೆ ಮಾಡಲಾಗಿದೆ. ಸರ್ಕಾರದಿಂದ ಒಂದು ಸಂಸ್ಥೆಗೆ ಔಷಧ, ಆಹಾರ ಕಿಟ್ ಗಳನ್ನು ವಿತರಿಸಲು ಸೂಚಿಸಲಾಗಿದ್ದು, ಒಂದು ವೇಳೆ ಆ ಸಂಸ್ಥೆ ಎಂಡೋಸಲ್ಫಾನ್ ಸಂತ್ರಸ್ತರಿಗೆ ಸರಿಯಾಗಿ ಔಷಧ ಮತ್ತು ಆಹಾರ ಕಿಟ್ ವಿತರಿಸದೇ ಇದ್ದರೆ ಸಂಸ್ಥೆ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಹಾಗೂ ಸಂತ್ರಸ್ತರಿಗೆ ಸರ್ಕಾರದಿಂದ ದೊರೆಯುವ 4 ಸಾವಿರ ಮಾಶಾಸನ ಸರಿಯಾದ ಸಮಯಕ್ಕೆ ದೊರೆಯುವಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಭಟ್ಕಳ ತಾಲ್ಲೂಕು ಆಸ್ಪತ್ರೆ ಅವ್ಯವಸ್ಥೆ ಕುರಿತಂತೆ ಪ್ರತಿಕ್ರಿಯಿಸಿದ ಸಚಿವರು, ವೈದ್ಯರು ಹಾಗೂ ಸಿಬ್ಬಂದಿಗಳು ರೋಗಿಗಳು ಆಸ್ಪತ್ರೆಗೆ ಬಂದರೆ ತಕ್ಷಣವೇ ಚಿಕಿತ್ಸೆ ನೀಡಬೇಕು. ಒಂದು ವೇಳೆ ಚಿಕಿತ್ಸೆ ನೀಡಲು ನಿರ್ಲಕ್ಷ್ಯ ತೋರಿದ್ದರೆ ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಜನರ ಜೀವ ರಕ್ಷಣೆ ಮಾಡಬೇಕಾದವರೇ ನಿರ್ಲಕ್ಷ್ಯ ತೋರಿರುವುದು ಖಂಡನೀಯ ಎಂದ ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಕೂಡಲೇ ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ಪರಶೀಲಿಸಿ ಕ್ರಮ ಕೈಗೊಳ್ಳುವಂತೆ ಹಾಗೂ ಸರ್ಕಾರಿ ವೈದ್ಯರು ಯಾವುದೇ ಕಾರಣಕ್ಕೂ ರೋಗಿಗಳಿಗೆ ಚೀಟಿ ನೀಡಿ ಹೊರಗಿನಿಂದ ಔಷÀಧ ತರಲು ತಿಳಿಸಬಾರದು. ಆಸ್ಪತ್ರೆಯಲ್ಲಿ ಔಷಧ ಲಭ್ಯವಿಲದೇ ಹೋದರೆ ಔಷಧವನ್ನು ಖರೀದಿಸಿ ರೋಗಿಗಳಿಗೆ ಚಿಕಿತ್ಸೆ ನೀಡಬೇಕು ಎಂದರು.
ಜಿಲ್ಲೆಯಲ್ಲಿ ಶ್ರವಣ ತಜ್ಞರ ಹುದ್ದೆ ಖಾಲಿ ಇರುವ ಸಂಬಂಧಿಸಿದಂತೆ ಪಕ್ಕದ ಜಿಲ್ಲೆಯಲ್ಲಿರುವ ತಜ್ಞ ವೈದ್ಯರನ್ನು ವಾರದಲ್ಲಿ 3 ದಿನಗಳ ಕಾಲ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಲುವ ವ್ಯವಸ್ಥೆ ಮಾಡುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿರುವುದುಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅವರು ಇದ್ದರಿಂದ ಹೆದ್ದಾರಿಯಲ್ಲಿ ಅನೇಕ ಅಪಘಾತವಾದರೂ ಎಚ್ಚೆತ್ತುಕೊಳ್ಳದ ಗುತ್ತಿಗೆ ಪಡೆದ ಕಂಪನಿಯ ಹೆಸರನ್ನು, ಅಪಘಾತಕ್ಕೆ ಕಾರಣ ಎಂದು ನಮೂದಿಸಿ ಎಫ್.ಐ.ಆರ್. ದಾಖಲಿಸುವಂತೆ ಸೂಚಿಸಿದರು.
ಜನ ಸ್ಪಂದನ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಹಣಿ ಪತ್ರ, ಪೋಡಿ, ರಸ್ತೆ ನಿರ್ಮಾಣ, ಬೀದಿ ದೀಪ, ಒಳಚರಂಡಿ, ಮಕ್ಕಳ ವಸತಿ ಶಾಲೆಗೆ ಸೇರಿಸುವ, ವಿದ್ಯುತ್ ಹಾಗೂ ಪಿಂಚಣಿ ಕುರಿತಂತೆ ಅರ್ಜಿಗಳು ಸ್ವೀಕೃತವಾದವು.
ಭಟ್ಕಳದಲ್ಲಿ ಕಟ್ಟಡ ಕಾರ್ಮಿಕರಿಗೆ ನೀಡಲಾದ ಕಾರ್ಡ್ಗಳನ್ನು ನವೀಕರಿಸದೇ ರದ್ದುಪಡಿಸಿದ ಕುರಿತು ಪ್ರತಿಕ್ರಿಯಿಸಿದ ಸಚಿವರು ಅರ್ಹ ಕಾರ್ಮಿಕರ ಕಾರ್ಡ್ಗಳನ್ನು ನವೀಕರಿಸಿ ಶೀಘ್ರದಲ್ಲೇ ವಿತರಿಸುವಂತೆ ಕಾರ್ಮಿಕ ನಿರೀಕ್ಷಕರಿಗೆ ನಿರ್ದೇಶನ ನೀಡಿದರು.
ಮಂಕಿಯಲ್ಲಿ ಈ ಹಿಂದೆ ಸಾರಿಗೆ ಸಂಸ್ಥೆಯ ವೇಗದೂತ ಬಸ್ಗಳು ನಿಲ್ಲಿಸಲಾಗುತ್ತಿತ್ತು. ಆದರೇ ಈಗ ಯಾವುದೇ ವೇಗದೂತ ಬಸ್ಗಳು ನಿಲುಗಡೆ ಮಾಡಲಾಗುತ್ತಿಲ್ಲ. ಎಂಬ ಸಾರ್ವಜನಿಕರ ಮನವಿಗೆ ಪ್ರತಿಕ್ರಿಯಿಸಿದ ಸಚಿವರು ವೇಗದೂತ ಬಸ್ಗಳ ಮಂಕಿಯಲ್ಲಿ ನಿಲುಗಡೆಗೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗೆ ಸೂಚನೆ ನೀಡಲಾಗುವುದು ಎಂದರು.
ಶಿರಸಿ ತಾಲೂಕಿನ ಹಿಟ್ಕುಳಿ ಗ್ರಾಮದ ಅರಣ್ಯ ಇಲಾಖೆಯ ಜಾಗದಲ್ಲಿ ವೃದ್ದರೊಬ್ಬರು ಗುಡಿಸಲು ಹಾಕಿಕೊಂಡು ಅವರ ಪತ್ನಿಯ ಜೊತೆ ವಾಸವಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಗುಡಿಸಲು ತೆರವುಗೊಳಿಸಿರುವುದರ ಕುರಿತಂತೆ ಅಳಲು ತೊಡಿಕೊಂಡ ವೃದ್ದನಿಗೆ ಸಚಿವರು ಅಲ್ಲಿಯೇ ನಿವೇಶನ ಲಭ್ಯವಿದ್ದರೇ ಸ್ವಂತ ಮೊತ್ತದಲ್ಲಿ ಮನೆ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದರು.
ಭಟ್ಕಳದ ಹಿರಿಯ ನಾಗರಿಕರೊಬ್ಬರು ಭಟ್ಕಳ ತಾಲೂಕಿನಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿ ಹಾಗೂ ಪಾಸ್ ಪೋರ್ಟ್ ಕಚೇರಿಯನ್ನು ತೆರೆಯುವಂತೆ ಸಚಿವರಲ್ಲಿ ಮನವಿ ಮಾಡಿದರು.
ಉದ್ಯೋಗ ಮತ್ತಿತರ ವಿಷಯಗಳ ಕುರಿತು ಮನವಿ ಸಲ್ಲಿಸಿದ ಹಲವು ಮಂದಿಗೆ ಸಚಿವರು ನೆರವು ನೀಡುವ ಭರವಸೆ ನೀಡಿದರು.
ಹಲವು ಸಮಸ್ಯೆಗಳ ಕುರಿತಂತೆ ಸಂಬಂಧಪಟ್ಟ ಅಧಿಕಾರಿಗಳೇ ತಮ್ಮ ವ್ಯಾಪ್ತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬಹುದಾಗಿದ್ದು, ಈ ಸಮಸ್ಯೆಗಳ ಬಗ್ಗೆ ಜನ ಸ್ಪಂದನ ಕಾರ್ಯಕ್ರಮದಲ್ಲಿ ಅರ್ಜಿ ಸಲ್ಲಿಕೆಯಾಗುತ್ತಿದ್ದಲ್ಲಿ, ಇದು ಅಧಿಕಾರಿಗಳ ನಿರ್ಲಕ್ಷ್ಯತನವನ್ನು ತೋರಿಸುತ್ತದೆ. ಜನ ಸಾಮಾನ್ಯರ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯತನ ತೋರದೇ ಜವಾಬ್ದಾರಿಯುತವಾಗಿ ಮತ್ತು ಮಾನವೀಯ ನೆಲೆಯಲ್ಲಿ ಅವರಿಗೆ ನೆರವು ನೀಡಬೇಕು ಎಂದು ಸಚಿವ ಮಂಕಾಳ ವೈದ್ಯ ತಿಳಿಸಿದರು.