ದಾಂಡೇಲಿ : ನಗರದ ಜೆ.ಎನ್ ರಸ್ತೆಯಲ್ಲಿ ಬೀದಿ ನಾಯಿಗಳು ಏಕಾಏಕಿ ಅಡ್ಡ ಬಂದ ಪರಿಣಾಮವಾಗಿ ದ್ವಿಚಕ್ರ ವಾಹನವೊಂದು ಸ್ಕಿಡ್ ಆಗಿ ಬಿದ್ದು, ಸವಾರನಿಗೆ ಗಾಯವಾದ ಘಟನೆ ಶನಿವಾರ ನಡೆದಿದೆ.
ನಗರದ ಟೌನಶಿಪ್ ನಿವಾಸಿ ವಿಜಯ್ ಬಿಂದು ಎಂಬವರೇ ದ್ವಿಚಕ್ರ ವಾಹನದಿಂದ ಸ್ಕಿಡ್ ಆಗಿ ಬಿದ್ದು ಗಾಯಗೊಂಡ ವ್ಯಕ್ತಿಯಾಗಿದ್ದಾರೆ. ಅವರು ಪಟೇಲ್ ವೃತ್ತದಿಂದ ಟೌನಶಿಪಿಗೆ ಬರುತ್ತಿರುವಾಗ ಎಲ್.ಐ.ಸಿ ಕಚೇರಿಯ ಮುಂಭಾಗದ ಜೆ.ಎನ್.ರಸ್ತೆಯಲ್ಲಿ ಏಕಾಏಕಿ ಏಳೆಂಟು ಬೀದಿ ನಾಯಿಗಳು ಅಡ್ಡ ಬಂದ ಪರಿಣಾಮವಾಗಿ, ಬೈಕ್ ನಿಯಂತ್ರಣ ತಪ್ಪಿ, ಸ್ಕಿಡ್ ಆಗಿ ಬಿದ್ದಿದೆ. ಈ ಸಂದರ್ಭದಲ್ಲಿ ವಿಜಯ್ ಬಿಂದು ಅವರ ಕಾಲಿಗೆ ಗಾಯವಾಗಿದೆ. ಗಾಯಗೊಂಡ ಅವರನ್ನು ತಕ್ಷಣವೇ ನಗರದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತರಲಾಗಿದೆ.
ನಗರದಲ್ಲಿ ಬೀದಿ ನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಬೀದಿ ನಾಯಿಗಳ ನಿಯಂತ್ರಣಕ್ಕೆ ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ನಗರದ ಬಿಜೆಪಿ ಮುಖಂಡರಾದ ಸಂತೋಷ ಬುಲುಬುಲೆ ಅವರು ಮಾಧ್ಯಮದ ಮೂಲಕ ಸಂಬಂಧಪಟ್ಟ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.