ಕೊಂಕಣ ರೈಲ್ವೆ ಸಿಎಸ್ಆರ್ ನಿಧಿಯಿಂದ ವಿದ್ಯಾರ್ಥಿನಿಯರಿಗೆ ಸೈಕಲ್ ವಿತರಣೆ
ಕಾರವಾರ: ಬೇಸಿಗೆಯ ರಜೆಯ ಮೋಜಿನೊಂದಿಗೆ ಪ್ರತಿ ದಿನವೂ ಓದು ಹಾಗೂ ಬರೆಯುವುದನ್ನೂ ನಿರಂತರವಾಗಿ ಮಾಡುತ್ತಿರಬೇಕು ಎಂದು ಕೆಪಿಎಸ್ ಶಿರವಾಡ ಪ್ರೌಢಶಾಲೆಯ ಉಸ್ತುವಾರಿ ಅಧಿಕಾರಿಗಳೂ ಆಗಿರುವ ಡಿಡಿಪಿಐ ಲತಾ ನಾಯಕ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ತಾಲೂಕಿನ ಶಿರವಾಡದ ಕರ್ನಾಟಕ ಪಬ್ಲಿಕ್ ಸ್ಕೂಲ್ನಲ್ಲಿ ಬುಧವಾರ ನಡೆದ ‘ಸಮುದಾಯದತ್ತ ಶಾಲೆ’ ಹಾಗೂ ಕೊಂಕಣ ರೈಲ್ವೇ ವತಿಯಿಂದ ಪ್ರೌಢಶಾಲೆ ವಿದ್ಯಾರ್ಥಿನಿಯರಿಗೆ ‘ಉಚಿತ ಸೈಕಲ್ ವಿತರಣೆ’ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಸರಕಾರಿ ಶಾಲೆಯಲ್ಲಿ ಎಲ್ಲ ಸೌಲಭ್ಯಗಳು ಉಚಿತವಾಗಿ ದೊರೆಯುತ್ತವೆ. ಇಂದು ಈ ಸಾಲಿನ 2 ನೇ ಸಮುದಾಯದತ್ತ ಶಾಲೆ ಕಾರ್ಯಕ್ರಮ ನಡೆಯುತ್ತಿದ್ದು ಮಕ್ಕಳಿಗಿಂತ ಪಾಲಕರ ಅಸ್ತಿತ್ವ ಈ ಕಾರ್ಯಕ್ರಮದಲ್ಲಿ ಮುಖ್ಯ. ಇಂದು ಹೆಚ್ಚಿನ ಸಂಖ್ಯೆಯಲ್ಲಿ ತಾಯಂದಿರೇ ಕಾಣುತ್ತಿದ್ದಾರೆ. ಆದರೆ ವಿದ್ಯಾರ್ಥಿಗಳ ತಂದೆ ಹಾಗೂ ತಾಯಿ ಇಬ್ಬರೂ ಬಂದರೆ ಉತ್ತಮವಾಗಿರುತ್ತದೆ ಎಂದರು. 8 ಹಾಗೂ 9ನೇ ತರಗತಿಯಲ್ಲಿ ಎಲ್ಲರೂ ಉತ್ತೀರ್ಣರಾಗುತ್ತಾರೆ. ಆದರೆ ಅವರಲ್ಲಿ ಕಡಿಮೆ ಅಂಕ ಬಂದ ವಿದ್ಯಾರ್ಥಿಗಳ ಪಾಲಕರು ಹೆಚ್ಚಿನ ಮುತುವರ್ಜಿ ವಹಿಸಬೇಕು. ಹೀಗಾಗಿ ರಜೆಯಲ್ಲೂ ವಿವಿಧ ಚಟುವಟಿಕೆಗಳಲ್ಲಿ ತೊಡಗುವ ಜೊತೆಗೆ ಓದು ಬರಹದ ಹವ್ಯಾಸ ರೂಢಿಸಿಕೊಳ್ಳಬೇಕು. ಜೊತೆಗೆ ಮಕ್ಕಳ ಬಗ್ಗೆ ಪಾಲಕರು ಸದಾ ನಿಗಾ ಇರಿಸಬೇಕು. ಅವರ ಸುರಕ್ಷತೆ, ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.
ಈ ಶಾಲೆ ಶೈಕ್ಷಣಿಕವಾಗಿ ಹಾಗೂ ಭೌತಿಕವಾಗಿ ಅಭಿವೃದ್ಧಿ ಆಗಬೇಕು. ಈ ನಿಟ್ಟಿನಲ್ಲಿ ಉಸ್ತುವಾರಿ ಅಧಿಕಾರಿಯಾಗಿ ಎಲ್ಲ ಪ್ರಯತ್ನವನ್ನು ಮಾಡುತ್ತೇನೆ ಎಂದರು.
ಕೊಂಕಣ ರೈಲ್ವೆ ಇಲಾಖೆಯವರು ಹೆಣ್ಣು ಮಕ್ಕಳಿಗೆ ಸೈಕಲ್ ವಿತರಣೆ ಮಾಡಿದ್ದು ಉತ್ತಮ ಪ್ರೋತ್ಸಾಹ ನೀಡಿದ್ದಾರೆ. ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಹಾಗೂ ಮುಂದೆಯೂ ಅವರಿಂದ ಶಾಲೆಗಳಿಗೆ ಸಹಕಾರ ದೊರೆಯುತ್ತಿರಲಿ ಎಂದರು.
ಕೊಂಕಣ ರೈಲ್ವೇಯ ಮುಖ್ಯ ಕಚೇರಿ ಸುಪರಿಂಟೆಂಡೆಂಟ್ ಅನಿಲ ಹಬ್ಬು ಮಾತನಾಡಿ ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ಈಗ ಶಾಲೆಯಲ್ಲಿ ಕೊಡುವ ಶಿಕ್ಷಣ ಜೀವನ ಪೂರ್ತಿ ದಾರಿ ದೀಪ ಆಗುತ್ತದೆ. ಸರಕಾರಿ ಶಾಲೆಯಲ್ಲಿ ಓದಿ ದೊಡ್ಡ ದೊಡ್ಡ ಅಧಿಕಾರಿ ಆಗಿರುವುದನ್ನು, ಹೊರದೇಶದಲ್ಲೂ ಉನ್ನತ ಹುದ್ದೆಯಲ್ಲಿ ಇರುವುದನ್ನು ಕಾಣಬಹುದು. ಹೀಗಾಗಿ ಚೆನ್ನಾಗಿ ಓದಿ ಹೆಚ್ಚಿನ ಅಂಕ ಪಡೆಯಬೇಕು. ಇಲ್ಲಿಯವರೆಗೆ ಓದಿದ್ದರಲ್ಲಿ ಹೆಚ್ಚು ಕಡಿಮೆ ಆದರೆ ಏನೂ ಸಮಸ್ಯೆ ಎನಿಸದು. ಆದರೆ ಇನ್ನು ಮುಂದಿನ ಶಿಕ್ಷಣ ಪ್ರಮುಖವಾಗಿದ್ದಾಗಿದ್ದು ಈ ಬಗ್ಗೆ ಹೆಚ್ಚಿನ ಗಮನ ಹರಿಸಿ ಎಂದು ಕರೆ ನೀಡಿದರು.
ಐಐಎಂ ಜಮ್ಮುವಿನ ಎಂಬಿಎ ಪ್ರೊಬೆಶನರಿ ಅಭಿಷೇಕ್ ಸಿಂಗ್ ದುಬೆ ಮಾತನಾಡಿ ಗುರುವು ನಮ್ಮ ಜೀವನದ ಮಾರ್ಗ ತೋರಿಸುವ ಚಾಲಕನಿದ್ದಂತೆ. ಅವರ ಮಾರ್ಗದರ್ಶನದಲ್ಲಿ ಮುಂದುವರಿದು ಉನ್ನತ ಏಳ್ಗೆಯನ್ನು ಪಡೆಯಿರಿ ಎಂದು ಸಲಹೆ ನೀಡಿದರು.
ಕೊಂಣಕಣ ರೈಲ್ವೇಯ ಪರ್ಸನಲ್ ಇನ್ಸ್ಪೆಕ್ಟರ್ ಗಜೇಂದ್ರ ತಳೇಕರ್ ಮಾತನಾಡಿ ಸರಕಾರಿ ಶಾಲೆಯಲ್ಲಿ ಕಲಿಯುವವರ ಸಂಖ್ಯೆ ಜಾಸ್ತಿ ಆಗಬೇಕು. ಹೀಗಾಗಿ ಸರಕಾರಗಳು ಹಲವು ಯೋಜನೆಗಳನ್ನು ರೂಪಿಸುತ್ತಿವೆ. ಅದರಂತೆ ಕಂಪನಿಗಳ ಲಾಭಾಂಶದಲ್ಲಿ ಇಷ್ಟು ಭಾಗವನ್ನು ಸಾಮಾಜಿಕ ಕಾರ್ಯಗಳಿಗಾಗಿ ಮೀಸಲಿಡುವುದು ಕಡ್ಡಾಯವಾಗಿದ್ದು ಅದರಂತೆ ಇಂದು ಕೊಂಕಣ ರೈಲ್ವೇಯಿಂದ ವಿದ್ಯಾರ್ಥಿನಿಯರಿಗೆ ಸೈಕಲ್ ನೀಡಲಾಗಿದೆ. ಸೌಲಭ್ಯಗಳ ಸದುಪಯೋಗ ಪಡಿಸಿಕೊಂಡು ಉತ್ತಮ ಅಭ್ಯಾಸ ಮಾಡಿ ಮುಂದೆ ನೀವು ಉತ್ತಮ ಸ್ಥಾನ ಪಡೆದು ಇದೇ ಶಾಲೆಯ ವೇದಿಕೆಯಲ್ಲಿ ಕುಳಿತುಕೊಳ್ಳುವಂತಾಗಬೇಕು. ನೀವು ನಿಮ್ಮ ಶಾಲೆಗೆ ಸಹಾಯ ಮಾಡಬೇಕು ಎಂದರು.
ವಿದ್ಯಾರ್ಥಿನಿಯರಿಗೆ ಕೊಂಕಣ ರೈಲ್ವೇ ವತಿಯಿಂದ ಸುರಕ್ಷತೆಯ ಶುಚಿ ಪ್ಯಾಡ್ಗಳನ್ನು ವಿತರಿಸಲಾಯಿತು. ಅಲ್ಲದೇ ಇಲಾಖೆಯ ಸೀನಿಯರ್ ನರ್ಸ್ ಸವಿತಾ ದುರ್ಗೇಕರ್ ಅವರು ಶುಚಿ ಪ್ಯಾಡ್ನ ಶುಚಿತ್ವ, ಮಹತ್ವ ಮತ್ತು ಸದ್ಬಳಕೆ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಮುಖ್ಯಾಧ್ಯಾಪಕರಾದ ಪ್ರಭಾಕರ ಚಿಕನ್ಮನೆ ಸ್ವಾಗತಿಸಿದರು. ಶಿಕ್ಷಕರಾದ ದಿನೇಶ ಕಿನ್ನರಕರ ನಿರೂಪಿಸಿದರು. ಶಿಕ್ಷಕಿ ರಾಜಶ್ರೀ ನಾಯಕ ವಂದಿಸಿದರು. ಈ ಸಂದರ್ಭದಲ್ಲಿ ಕೊಂಕಣ ರೈಲ್ವೇಯ ಭೋಜರಾಜ, ಕೊಂಕಣ ರೈಲ್ವೇಯ ಆಫೀಸ್ ಸುಪರಿಂಟೆಂಡೆಂಟ್ ಸ್ಮಿತಾ ನಾಯ್ಕ, ಎಸ್ಡಿಎಂಸಿ ಸದಸ್ಯರಾದ ಆಶಾ ಆಚಾರಿ, ಶ್ವೇತಾ ಕಾಣಕೋಣಕರ, ಹುಸೇನ್ ಸಾಬ್ ಮುಂತಾದವರಿದ್ದರು.