ಗಾಢನಿದ್ರೆಯಲ್ಲಿ ಅಂಕೋಲಾ ತೋಟಗಾರಿಕೆ ಇಲಾಖೆ ; ಚಂದು ನಾಯ್ಕ ಆಕ್ರೋಶ
ಅಂಕೋಲಾ: ತಾಲೂಕಿನ ಸುಂಕಸಾಳ ಗ್ರಾ.ಪಂ ವ್ಯಾಪ್ತಿಯ ಕೊಡ್ಲಗದ್ದೆ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ಬೀಸಿದ ರಣಭೀಕರ ಗಾಳಿ, ಮಳೆಗೆ ಕೃಷಿಕರ ತೋಟದಲ್ಲಿ ಸಾವಿರಕ್ಕೂ ಅಧಿಕ ಅಡಿಕೆ, ನೂರಾರು ತೆಂಗಿನ ಮರಗಳು ಮುರಿದು ಬಿದ್ದು ಸಾಕಷ್ಟು ಪ್ರಮಾಣದ ಹಾನಿಯಾಗಿದೆ.
ಅರ್ಧಗಂಟೆ ಬೀಸಿದ ಗಾಳಿಗೆ ಅಂದಾಜು ಎರಡು ಸಾವಿರಕ್ಕೂ ಅಧಿಕ ಅಡಿಕೆ ಮರಗಳು ಮುರಿದು ಬಿದ್ದರೂ ಸಂಬಂಧಪಟ್ಟ ತೋಟಗಾರಿಕೆ ಇಲಾಖೆಯ ಯಾವೊಬ್ಬ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದೇ ಇರುವುದಕ್ಕೆ ಸುಂಕಸಾಳ ಗ್ರಾ.ಪಂ ಸದಸ್ಯ ಚಂದು ನಾಯ್ಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಗಡಿಭಾಗದಲ್ಲಿರುವ ಕೊಡ್ಲಗದ್ದೆ ಗ್ರಾಮಕ್ಕೆ ಲಕ್ಷ್ಯವಹಿಸದೇ ಇಲಾಖೆಯ ಅಧಿಕಾರಿಗಳು ಘಾಡ ನಿದ್ರೆಯಲ್ಲಿರುವಂತೆ ತೋರುತ್ತಿದ್ದು ತೀವ್ರ ನಿರ್ಲಕ್ಷ್ಯ ತೋರಿಸುತ್ತಿರುವುದು ಬೇಸರ ತಂದಿದೆ. ಇನ್ನಾದರೂ ಮೇಲಾಧಿಕಾರಿಗಳು ನಮ್ಮ ಗ್ರಾಮದತ್ತ ಕಣ್ತೆರೆದು ನೋಡಲಿ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.