ದಾಂಡೇಲಿ : ಮನೆಯಲ್ಲಿ ಯಾರೂ ಇಲ್ಲದಿದ್ದ ಸಮಯದಲ್ಲಿ ರಾತ್ರಿ ವೇಳೆ ಮನೆಗೆ ನುಗ್ಗಿ ಬಂಗಾರ ಮತ್ತು ಬೆಳ್ಳಿಯ ಆಭರಣ, ಹಾಗೂ ನಗದನ್ನು ಕಳುವು ಮಾಡಿದ ಘಟನೆ ನಗರದ ಮಾರುತಿ ನಗರದಲ್ಲಿ ಗುರುವಾರ ತಡರಾತ್ರಿ ಇಲ್ಲವೇ ಶುಕ್ರವಾರ ನಸುಕಿನ ವೇಳೆ ನಡೆದಿದೆ.
ಮಾರುತಿ ನಗರದ ಮಹಮ್ಮದ್ ರಫೀಕ್ ಪಟೇಲ್ ಎಂಬವರು ವಾಸವಿರುವ ಬಾಡಿಗೆ ಮನೆಯಲ್ಲಿ ಕಳ್ಳತನ ನಡೆದಿದೆ. ಮಹಮ್ಮದ್ ರಫೀಕ್ ಪಟೇಲ್ ಅವರು ಕುಟುಂಬ ಸಮೇತರಾಗಿ ಸಂಬಂಧಿಕರ ಮನೆಗೆ ಹೋಗಿದ್ದರು. ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ್ದ ಕಳ್ಳರು ಮನೆಯ ಹಿಂಬದಿಯ ಬಾಗಿಲ ಚಿಲಕ ಮುರಿದು, ಮನೆಯ ಒಳಗಡೆ ಹೊಕ್ಕಿ, ಮನೆಯಲ್ಲಿದ್ದ ಮೂರು ಗೋಡ್ರೇಜ್ ಕಪಾಟಿನ ಬಾಗಿಲನ್ನು ಒಡೆದು, ಕಬಾಟಿನಲ್ಲಿದ್ದ 15 ಗ್ರಾಂ ತೂಕದ ಬಂಗಾರದ ಆಭರಣ, ನಗದು ರೂ.65,000/-, 25,000/- ರೂ ಮೌಲ್ಯದ ಬೆಳ್ಳಿಯ ಆಭರಣ, ಟಿವಿ ಮತ್ತು ಮಕ್ಕಳು ಹಣ ಸಂಗ್ರಹಿಸಿಟ್ಟಿದ್ದ ಮೂರ್ನಾಲ್ಕು ಕಾಯಿನ್ಸ್ ಡಬ್ಬಗಳನ್ನು ಕಳ್ಳರು ಕಳವು ಮಾಡಿದ್ದಾರೆ.
ಈ ಬಗ್ಗೆ ಮಹಮ್ಮದ್ ರಫೀಕ್ ಪಟೇಲ್ ಅವರು ನಗರ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. ನಗರ ಠಾಣೆಯ ತನಿಖಾ ವಿಭಾಗದ ಪಿಎಸ್ಐ ಕಿರಣ್ ಪಾಟೀಲ್ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆಯನ್ನು ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.