ಶಿರಸಿ: ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿ ನಡೆದ 33ನೇ ಘಟಿಕೋತ್ಸವದಲ್ಲಿ ಇಲ್ಲಿನ ಅಸ್ಮಿತೆ ಫೌಂಡೇಶನ್‌ನ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ರಿಯಾಜ್ ಸಾಗರ್ ಅವರಿಗೆ ರಾಜ್ಯಪಾಲರು ಹಾಗೂ ಕುಲಪತಿಗಳಾದ ಥಾವರ್ ಚಂದ್ ಗೆಹ್ಲೋಟ್ ಪಿಹೆಚ್‌ಡಿ ಪದವಿ ಪ್ರಧಾನ ಮಾಡಿದರು.
ರಿಯಾಜ್ ಸಾಗರ್ ಅವರು ಕನ್ನಡ ವಿವಿ ಬುಡಕಟ್ಟು ಅಧ್ಯಯನ ವಿಭಾಗ ಹಿರಿಯ ಪ್ರಾಧ್ಯಾಪಕ ಡಾ.ಎ. ಎಸ್. ಪ್ರಭಾಕರ ಅವರ ಮಾರ್ಗದರ್ಶನದಲ್ಲಿ “ಸಿದ್ದಿ ಬುಡಕಟ್ಟು ಸಮುದಾಯದ ಅಭಿವೃದ್ಧಿ – ಸವಾಲು ಮತ್ತು ಸಾಧ್ಯತೆಗಳು ( ಸರ್ಕಾರಿ ಅಬಿವೃದ್ಧಿ ಯೋಜನೆಗಳ ಒಂದುವರೆ ದಶಕದ ಅಧ್ಯಯನ) ಎಂಬ ವಿಷಯದಲ್ಲಿ ಸಂಶೋಧನ ಮಹಾಪ್ರಬಂಧಕ್ಕೆ ಪಿಹೆಚ್‌ಡಿ ಲಭಿಸಿದೆ. ಘಟಿಕೋತ್ಸವದಲ್ಲಿ ಉನ್ನತ ಶಿಕ್ಷಣ ಸಚಿವ ಹಾಗೂ ಸಮಕುಲಾಧಿಪತಿ ಡಾ.ಎಂ.ಸಿ. ಸುಧಾಕರ, ತುಮಕೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ರಾಜಾಸಾಬ್ ಎ.ಎಚ್., ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಿ.ವಿ. ಪರಮಶಿವಮೂರ್ತಿ, ನಾಡೋಜ ಗೌರವ ಪುರಸ್ಕೃತರಾದ ನ್ಯಾ. ಶಿವರಾಜ ವಿ. ಪಾಟೀಲ್, ಪದ್ಮಶ್ರೀ ಎಂ. ವೆಂಕಟೇಶ್ ಕುಮಾರ್, ಹಿರಿಯ ಸಾಹಿತಿ ಕುಂ ವೀರಭದ್ರಪ್ಪ (ಕಂವೀ) ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.