‘ಎಲೆಚುಕ್ಕಿ ರೋಗಕ್ಕೆ ಕೇಂದ್ರ ವಿಶೇಷ ಪ್ಯಾಕೆಜ್ ಘೋಷಿಸಲಿ’
ಶಿರಸಿ: ಕೇಂದ್ರ ಸರ್ಕಾರದ ನ್ಯೂನ್ಯತೆಯನ್ನು ಮರೆಮಾಚಲು, ಜನರ ಗಮನವನ್ನು ಬೇರೆಡೆ ಸೆಳೆಯಲು ಭಾರತೀಯ ಜನತಾ ಪಾರ್ಟಿ ಇಲ್ಲಸಲ್ಲದ ಹೇಳಿಕೆಯನ್ನು ನೀಡುತ್ತಿದೆ ಎಂದು ಕೆಪಿಸಿಸಿ ಸದಸ್ಯ ದೀಪಕ್ ದೊಡ್ಡೂರ್ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿ ಆಯೋಜಿಸಿ ಮಾತನಾಡಿದ ಅವರು ಲೋಕಸಭಾ ಚುನಾವಣೆ ನಡೆದು ಒಂದು ವರ್ಷಕ್ಕೆ ಬಂದಿದೆ. ಹವಾಮಾನ ಆಧಾರಿತ ಬೆಳೆ ವಿಮಾ ಇನ್ನೂ ರೈತರಿಗೆ ಬಂದಿಲ್ಲ. ಸಾಕಷ್ಟು ಬಾರಿ ರಾಜ್ಯ ಸರ್ಕಾರದ ಅಧಿಕಾರಿಗಳ ಬಗ್ಗೆ ಮಾತನಾಡಿದ್ದಾರೆ. ವಿಮಾ ಕಂಪನಿಯನ್ನು ಆಯ್ಕೆ ಮಾಡುವುದು ಕೇಂದ್ರ ಸರ್ಕಾರದ ಜವಾಬ್ದಾರಿ. ಮೂರು ಬಾರಿ ಕೇಂದ್ರ ಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಕೇಂದ್ರ ಸರ್ಕಾರ ವಿಮಾ ಕಂಪನಿಗೆ ವಿಮಾ ಹಣ ಜಮಾ ಮಾಡುವಂತೆ ಪತ್ರ ಕಳುಹಿಸಿದರೂ ಕೂಡಾ ರೈತರಿಗೆ ವಿಮಾ ಹಣ ಜಮಾ ಆಗದೇ ಇರುವುದು ಬೇಸರದ ಸಂಗತಿ.
ರಾಜ್ಯದಲ್ಲಿ ಅಧಿಕಾರಿಗಳು ಮಳೆ ವರದಿ ನೀಡುವಲ್ಲಿ ಎಡವಿರಬಹುದು. ಅದನ್ನು ಸರಿಪಡಿಸಿ ಹಣ ಜಮಾ ಮಾಡಬೇಕಿರುವುದು ಕೇಂದ್ರದ ಜವಾಬ್ದಾರಿ. ಅಂಕೋಲಾ ಹುಬ್ಬಳ್ಳಿ ರೈಲ್ವೆ ಯೋಜನೆ ನೆನೆಗುದಿಗೆ ಬಿದ್ದಿದೆ. ಸರ್ವೆಗಷ್ಟೇ ರೈಲ್ವೆ ಯೋಜನೆಗಳು ಸಿಮೀತವಾಗಿದೆ ಎಂದರು.
ಎಲೆ ಚುಕ್ಕೆ ರೋಗಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬಹುದಿತ್ತು. ಕೆಂದ್ರ ಸರ್ಕಾರ ನೀಡಿಲ್ಲ. ಸೀಬರ್ಡ್ ನಿರಾಶ್ರಿತರಿಗೆ ಪರಿಹಾರಕ್ಕೆ ಸಂಬಂಧಿಸಿ ಈಗಾಗಲೇ ಶಾಸಕ ಸತೀಶ್ ಸೈಲ್ ಸ್ಪಷ್ಟನೆ ಕೊಟ್ಟಿದ್ದಾರೆ. ಬಾಕಿ ಉಳಿದ ಪರಿಹಾರವನ್ನು ಕೇಂದ್ರ ಸರ್ಕಾರ ತಕ್ಷಣ ಬಿಡುಗಡೆ ಮಾಡಬೇಕು ಎಂದರು. ಜಿಲ್ಲೆಯಲ್ಲಿ ಸಾಂಬಾರು ಮಂಡಳಿ ಪರಿಸ್ಥಿತಿ ದಯನೀಯ ಪರಿಸ್ಥಿತಿಗೆ ಒಳಗಾಗಿದೆ. ಶಿಥಿಲಾ ವಸ್ಥೆಗೊಂಡ ಸಾಂಬಾರು ಮಂಡಳಿಯನ್ನು ಪುನಶ್ಚೇತನ ಮಾಡಬೇಕು. ರಾಜ್ಯದಲ್ಲಿ ಬಿಜೆಪಿ ಕಾಂಗ್ರೆಸ್ ವಿರುದ್ಧ ಬೆಲೆಯೆರಿಕೆಯನ್ನು ಖಂಡಿಸಿ ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ಮಾಡಿದ ದರ ಏರಿಕೆ ಬಗ್ಗೆ ಬಿಜೆಪಿ ಮಾತನಾಡುತ್ತಿಲ್ಲ. ಕೇಂದ್ರದ ದರ ಏರಿಕೆ ಬಗ್ಗೆಯೂ ಅವರ ನಾಯಕರಿಗೆ ಕಿವಿಮಾತು ಹೇಳಬೇಕು ಎಂದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಜಗದೀಶ ಗೌಡ, ಜ್ಯೋತಿ ಗೌಡ ಪಾಟೀಲ್, ಗಣೇಶ ದಾವಣಗೆರೆ, ಅಬ್ದುಲ್ ಖಾದರ ಆನವಟ್ಟಿ ಉಪಸ್ಥಿತರಿದ್ದರು.