ಸಿದ್ದಾಪುರ: ತಾಲೂಕಿನ ಹೆಗ್ಗರಣಿಯಲ್ಲಿ ಅಲ್ಲಿನ ಶ್ರೀ ಕಟ್ಟೆ ಬೀರಪ್ಪ ದೇವಸ್ಥಾನದ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮದ ಪ್ರಯುಕ್ತ ಶ್ರೀ ವೀರಮಾರುತಿ ಕದಂಬೇಶ್ವರ ಯಕ್ಷಗಾನ ಮಂಡಳಿಯ ಹಾಗೂ ಅತಿಥಿ ಕಲಾವಿದರಿಂದ ಏರ್ಪಡಿಸಲಾದ ಯಕ್ಷಗಾನ ಆಖ್ಯಾನ ದಕ್ಷಯಜ್ಞ ಅಪರೂಪದ ಪ್ರದರ್ಶನವಾಗಿ ಅಭಿವ್ಯಕ್ತಿಸಲ್ಪಟ್ಟಿತು.
ನಾಟ್ಯಾಚಾರ್ಯ ಶಂಕರ ಭಟ್ಟರ ಈಶ್ವರನ ಪಾತ್ರಕ್ಕೆ ಯಕ್ಷ ಪ್ರೇಕ್ಷಕರೊಬ್ಬರು ಬಹುಮಾನ ನೀಡುವುದರ ಮೂಲಕ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದು ವಿಶೇಷವಾಗಿತ್ತು. ದಕ್ಷನ ಪಾತ್ರ ನಿರ್ವಹಿಸಿದ ಸಂಜಯ ಬೆಳೆಯೂರ್ ಗತ್ತು, ಗಾಂಭೀರ್ಯ, ದಾಕ್ಷಾಯಣಿಯಾಗಿ ಅಭಿನಯಿಸಿದ ಮಾರುತಿ ಬೈಲಗದ್ದೆಯವರ ಭಾವಾಭಿವ್ಯಕ್ತಿ ಮನೋಜ್ಞವಾಗಿತ್ತು. ಹಾಸ್ಯಕ್ಕೆ ಹೆಸರಾದ ಶ್ರೀಧರ ಹೆಗಡೆ ಚಪ್ಪರಮನೆ ಹಾಗೂ ಅಶೋಕಭಟ್ ಸಿದ್ದಾಪುರರವರು ಬ್ರಾಹ್ಮಣ ದಂಪತಿಯಾಗಿ ನಡೆಸಿದ ಸಂಭಾಷಣೆ- ನಗೆಗಡಲಲ್ಲಿ ತೇಲಾಡಿಸಿತು. ಛಾಯಾ ಹೆಗ್ಗರಣಿಯವರ ವೀರಣಿ-ಈಶ್ವರ ಭಟ್‌ತೆಪ್ಪಗಿಯವರ ದೇವೇಂದ್ರ-ನಯನ ಮನೋಹರವಾಗಿ ಮೂಡಿಬಂದವು. ಮಾರ್ಷಲ್ ಮೂರೂರ್ ರವರ ವೀರಭದ್ರನ ಕೋಪಾಟೋಪ ಕಣ್ಮನ ಸೆಳೆಯಿತು.
ಹಿಮ್ಮೇಳದಲ್ಲಿ ಖ್ಯಾತ ಭಾಗವತರಾದ ಸರ್ವೇಶ ಹೆಗಡೆ ಮೂರೂರ್ ರವರ ಸುಶ್ರಾವ್ಯ ಗಾಯನ ಕಾರ್ಯಕ್ರಮಕ್ಕೆ ಕಳೆಯೇರಿಸಿತು. ಮದ್ಧಲೆ ವಾದಕರಾದ ಮಾಧವ ಕೆರೆಕೋಣ್- ಚೆಂಡೆವಾದಕರಾದ ಗಜಾನನ ಹೆಗಡೆ ಕತ್ರಗಾಲ್ ಅತ್ಯುತ್ತಮ ಸಾತ್ ನೀಡಿ ರಂಜಿಸಿದರು. ಯಕ್ಷರಾಧಕರಾದ ರಘುಪತಿ ನಾಯ್ಕರು ವೇಷಭೂ಼ಷಣ ಒದಗಿಸಿದ್ದರು. ದೇವಾಲಯದ ಆಡಳಿತ ಮಂಡಿಳಿಯವರು ಕಲಾವಿದರನ್ನು ಗೌರವಿಸಿದರು.