ಶಿರಸಿ: ದಿ ತೋಟಗಾರ್ಸ ಕೋ-ಆಪರೇಟಿವ್ ಸೇಲ್ ಸೊಸೈಟಿಯ ಪ್ರಧಾನ ಕಛೇರಿಯಲ್ಲಿ ಮಾ.25, ಮಂಗಳವಾರದಂದು 2024-25ನೇ ಸಾಲಿನ ಅರ್ಹ ವಿದ್ಯಾರ್ಥಿಗಳಿಗೆ ಶಿಕ್ಷಣ ಸಹಾಯ ಧನ ವಿತರಣಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಟಿ.ಎಸ್.ಎಸ್. ಅಧ್ಯಕ್ಷ ಗೋಪಾಲಕೃಷ್ಣ ವೆಂಕಟ್ರಮಣ ವೈದ್ಯ ಪ್ರಾಸ್ತಾವಿಕ ಮಾತನಾಡುತ್ತ ಸಂಘದಿಂದ ಅರ್ಹ ಸದಸ್ಯರ ಪ್ರತಿಭಾವಂತ ಮಕ್ಕಳ ಶಿಕ್ಷಣಕ್ಕೆ ಸದಸ್ಯರ ಕ್ಷೇಮನಿಧಿಯಿಂದ ರೂ. 12,50,000/- ಸಹಾಯಧನ ವಿತರಿಸುತ್ತಿದ್ದೇವೆ. ಈ ವರ್ಷದಲ್ಲಿ ಎಸ್.ಎಸ್.ಎಲ್.ಸಿ. ಪಿಯುಸಿ, ಡಿಗ್ರಿ ವೃತ್ತಿಪರ ಶಿಕ್ಷಣ ವ್ಯಾಸಂಗ ನಿರತರಿಗೆ ರೂ. 11,97,000/- ವಿದ್ಯಾರ್ಥಿ ವೇತನ ರೂಪದಲ್ಲಿ ನೀಡಲಾಗಿದೆ. ಸಂಘದಿಂದ ವಾರ್ಷಿಕ 25 ಲಕ್ಷಕ್ಕೂ ಹೆಚ್ಚಿನ ಹಣವನ್ನು ವಿವಿಧ ರೂಪದಲ್ಲಿ ಶಿಕ್ಷಣಕ್ಕಾಗಿ ನೀಡುತ್ತಿರುವುದನ್ನು ಉಲ್ಲೇಖಿಸಿ ರೈತರು ದೇಶದ ಬೆನ್ನೆಲುಬಾದಂತೆ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಸಂಸ್ಕಾರ ಪಡೆದು ದೇಶದ ಆಸ್ತಿಯಾಗಬೇಕು ಎಂದು ಆಶಿಸಿ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯ ರೂಪಿಸಿಕೊಳ್ಳುವಂತೆ ಶುಭಹಾರೈಸಿದರು.
ಸಹಾಯಧನ ಸ್ವೀಕರಿಸಿದ ವಿದ್ಯಾರ್ಥಿಗಳ ಪಾಲಕರ ಪರವಾಗಿ ಶ್ರೀಪಾದ ಹೆಗಡೆ ಹೊನ್ನೇಕೈ ಇವರು ಬಡ ಮತ್ತು ಮದ್ಯಮ ವರ್ಗದವರು ಮಕ್ಕಳಿಗೆ ಶಿಕ್ಷಣ ಕೊಡಿಸುವುದು ದುಸ್ಥರವಾಗಿರುವ ಇಂದಿನ ಕಾಲದಲ್ಲಿ ಟಿ.ಎಸ್.ಎಸ್ ವತಿಯಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಈ ರೀತಿ ಸಹಾಯಧನ ನೀಡುತ್ತಿರುವುದು ಹೆಮ್ಮೆಯ ವಿಷಯ. ಬಹಳ ಸದಸ್ಯರು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಟಿ.ಎಸ್.ಎಸ್. ನಿರ್ದೇಶಕರಾದ ರವೀಂದ್ರ ಜೆ. ಹೆಗಡೆ ಹೀರೇಕೈ ಸ್ವಾಗತಿಸಿದರು. ಟಿ.ಎಸ್.ಎಸ್. ನಿರ್ದೇಶಕರಾದ ವಸಂತ ಹೆಗಡೆ ಶಿರಿಕುಳಿ ವಂದನಾರ್ಪಣೆ ನೆರವೇರಸಿದರು. ಸಹಾಯಕ ವ್ಯವಸ್ಥಾಪಕ ಗೋಪಾಲ ಹೆಗಡೆ ಕಾರ‍್ಯಕ್ರಮ ನಿರ್ವಹಿಸಿದರು. ಟಿ.ಎಸ್.ಎಸ್. ಉಪಾಧ್ಯಕ್ಷರಾದ ಎಂ.ಎನ್.ಭಟ್ಟ ತೋಟಿಮನೆ, ಪ್ರಧಾನ ವ್ಯವಸ್ಥಾಪಕ ಗಿರೀಶ ಹೆಗಡೆ ಹಾಗೂ ನಿರ್ದೇಶಕರು, ವಿದ್ಯಾರ್ಥಿಗಳು, ಪಾಲಕರು, ಸದಸ್ಯರು ಸಿಬ್ಬಂದಿಗಳು ಉಪಸ್ಥಿತರಿದ್ದರು.