ಕಾರವಾರ: ಮದ್ಯಪಾನ ಮತ್ತು ಮಾದಕ ವಸ್ತುಗಳ ಚಟಗಳಿಗೆ ಯುವ ಸಮೂಹ ಬಲಿಯಾಗುತ್ತಿದ್ದು, ಇದನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಸರಕಾರ, ವಿವಿಧ ಇಲಾಖೆಗಳು, ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳ ಸಹಕಾರ ಮತ್ತು ಸಂಘಟಿತ ಪ್ರಯತ್ನದಿಂದ ಮಾತ್ರ ಇವುಗಳನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಹಾಗೂ ಜಿಲ್ಲಾ ಮಾನಸಿಕ ಅರೋಗ್ಯ ಕಾರ್ಯಕ್ರಮಾಧಿಕಾರಿ ಡಾ. ಶಂಕರ ರಾವ್ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಗುರುವಾರ ಸರಕಾರಿ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಸಭಾಂಗಣದಲ್ಲಿ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸರಕಾರಿ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಕಾರವಾರ ಹಾಗೂ ಎನ್.ಎಸ್.ಎಸ್.ಮತ್ತು ಎನ್.ಸಿ.ಸಿ.ಘಟಕ ಇವರ ಸಂಯುಕ್ತಾಶ್ರಯದಲ್ಲಿ ಅಯೋಜಿಸಲಾದ ಮದ್ಯಪಾನ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮ ಬಗ್ಗೆ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಗತ್ತಿನಲ್ಲಿ ಮಾದಕ ವಸ್ತುಗಳು ಅನೇಕ ಬಗೆಯಲ್ಲಿ ಲಭ್ಯವಾಗುತ್ತಿದ್ದು, ಯುವ ಜನತೆ ಇವುಗಳ ಸೇವನೆಯಿಂದ ತಮ್ಮ ಅಮೂಲ್ಯ ಜೀವನವನ್ನು ಹಾಳುಮಾಡಿಕೊಳ್ಳುವ ಮೂಲಕ ತಮ್ಮ ಕುಟುಂಬವನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದ್ದಾರೆ. ಮದ್ಯಪಾನ ಮತ್ತು ಮಾದಕ ವಸ್ತುಗಳಿಂದ ಆಗುವ ದುಷ್ಪರಿಣಾಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗುತ್ತಿದ್ದರೂ ಕೂಡ ಅದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಇದರ ನಿಯಂತ್ರಣವನ್ನು ಪ್ರತೀ ಮನೆಯಿಂದ ಜಾರಿಗೊಳಿಸುವ ಮೂಲಕ ಕ್ರಾಂತಿಕಾರಿ ಬದಲಾವಣೆಗೆ ನಾಂದಿಯಾಡಬೇಕು ಎಂದರು.
ಅದ್ಯಕ್ಷತೆ ವಹಿಸಿದ್ದ ಸರಕಾರಿ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಪ್ರಾಂಶುಪಾಲೆ ಗೀತಾ ಎಸ್ ವಾಲೀಕರ್ ಮಾತನಾಡಿ, ಪ್ರಸ್ತುತ ವಾತಾವರಣದಲ್ಲಿ ಯುವ ಜನತೆ ತಮ್ಮ ಮನಸ್ಸನ್ನು ಋಣಾತ್ಮಕ ಯೋಚನೆಗಳಿಗೆ ಅವಕಾಶ ನೀಡುವುದರ ಮೂಲಕ ಶೀಘ್ರದಲ್ಲಿ ಮಾದಕ ವಸ್ತುಗಳ ಸೇವನೆಗೆ ಒಳಗಾಗುತ್ತಾರೆ. ಯುವ ಜನತೆ ತಮ್ಮ ಯಾವುದೇ ಸಮಸ್ಯೆಗಳನ್ನು ಮೊದಲು ತಮ್ಮ ಪಾಲಕರ ಜೊತೆ ಹಂಚಿಕೊಳ್ಳುವುದರ ಮೂಲಕ ಆ ಸಮಸ್ಯೆಗಳನ್ನು ಪರಿಹರಿಸಿಕೊಂಡು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಜೀವನ ರೂಪಿಸಿಕೊಳ್ಳಬೇಕು. ಜೀವನದಲ್ಲಿ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಂಡು ಮಾದಕ ವಸ್ತುಗಳು ಸೇವನೆ ಬೇಡವೆಂದು ನಿರ್ಧಾರ ಕೈಗೊಂಡು, ತಮ್ಮ ಪರಿಚಯದವರಿಗೂ ಕೂಡಾ ಇವುಗಳನ್ನು ಸೇವನೆ ಮಾಡದಂತೆ ಜಾಗೃತರನ್ನಾಗಿ ಮಾಡಿ, ಮಾದಕ ವಸ್ತುಗಳ ದುಷ್ಚಟಗಳಿಗೆ ಒಳಗಾಗದಂತೆ ನೋಡಿಕೊಳ್ಳಬೇಕು ಎಂದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಬಿ. ಶಿವಕುಮಾರ್ ಸ್ವಾಗತಿಸಿ , ಪ್ರಾಸ್ತವಿಕವಾಗಿ ಮಾತನಾಡಿ, ಯುವ ಪೀಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮದ್ಯ ಮತ್ತು ಮಾದಕ ವಸ್ತುಗಳ ಸೇವನೆಗೆ ಬಲಿಯಾಗುತ್ತಿದ್ದು, ದೃಢ ನಿರ್ಧಾರದ ಮೂಲಕ ಇವುಗಳ ಸೇವನೆಯಿಂದ ದೂರ ಉಳಿದು ಆರೋಗ್ಯಯುತ ಜೀವನ ನಡೆಸಬೇಕು ಎಂದರು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನೋವೈದ್ಯ ಡಾ. ಸುಹಾಸ್ ಮಾತನಾಡಿ, ಮದ್ಯಪಾನ, ಚರಸ್, ಗಾಂಜಾ, ಕೊಕೇನ ಎoiಟಿಣ ತಿeeಜ, ಹಶಿಸ್ ನಂತಹ ಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದರ ಜೊತೆಗೆ ಕುಟುಂಬದ ಮೇಲೆಯೂ ಪರಿಣಾಮ ಬೀರುತ್ತದೆ. ಮದ್ಯ ಮತ್ತು ಮಾದಕ ವಸ್ತುಗಳ ಸೇವೆನೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಲಿದ್ದು, ಇದರಿಂದ ದೇಹದ ಪ್ರಮುಖ ಅಂಗಾಂಗಗಳಿಗೆ ಹಾನಿಯಾಗಲಿದ್ದು, ಮಾನಸಿಕ ಖಿನ್ನತೆ ಕಂಡುಬರಲಿದೆ. ಸೂಕ್ತ ಚಿಕಿತ್ಸೆ ಮತ್ತು ಆಪ್ತ ಸಮಾಲೋಚನೆಯ ಮೂಲಕ ಈ ಪಿಡುಗಿಗೆ ಒಳಗಾಗಿರುವವರನ್ನು ಗುಣಪಡಿಸಲು ಸಾಧ್ಯವಿದೆ. ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಆರೋಗ್ಯಕರ ಜೀವನ ಶೈಲಿ ಮತ್ತು ಪೌಷ್ಠಿಕಾಂಶಯುಕ್ತ ಆಹಾರ ಸೇವನೆ ಹಾಗೂ ಹಸಿರು ತರಕಾರಿಗಳನ್ನು ಒಳಗೊಂಡ ಆಹಾರಪದ್ದತಿಯನ್ನು ರೂಡಿಸಿಕೊಳ್ಳಬೇಕು, ಕ್ರೀಡೆ, ಕಲೆ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತಿತರ ಚಟುವಟಿಕೆಗಳಲ್ಲಿ ತೊಡಗಬೇಕು ಎಂದರು.
ಮಾದಕ ವಸ್ತು ಸೇವನೆಯಿಂದ ಹೊರಬರಲು ನಶಾ ಮುಕ್ತ ಭಾರತ ಅಭಿಯಾನದ ಉಚಿತ ಸಹಾಯವಾಣಿ 14446 ಗೆ ಕರೆ ಮಾಡುವ ಮೂಲಕ ಹಾಗೂ ಪರೀಕ್ಷಾ ಒತ್ತಡ, ಕೌಟುಂಬಿಕ ಸಮಸ್ಯೆ ಸೇರಿದಂತೆ ಇತರೇ ಯಾವುದೇ ಮಾನಸಿಕ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಪಡೆಯಲು ರಾಷ್ಟ್ರೀಯ ಟೆಲಿ-ಮಾನಸಿಕ ಆರೋಗ್ಯ ಕಾರ್ಯಕ್ರಮದ ಟೆಲಿ ಮನಸ್ ಉಚಿತ ಸಹಾಯವಾಣಿ ಸಂಖ್ಯೆ: 14416 ಗೆ ಕರೆ ಮಾಡಿ ಆಪ್ತ ಸಮಾಲೋಚನೆ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಎಂದರು.
ಎನ್.ಸಿ.ಸಿ. ವಿದ್ಯಾರ್ಥಿಗಳಿಂದ ಮದ್ಯಪಾನ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಕಿರು ನಾಟಕ ಪ್ರದರ್ಶನ ನಡೆಯಿತು.
ಕಾರ್ಯಕ್ರಮದಲ್ಲಿ ಸರಕಾರಿ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಹಿಂದಿ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಹಾಗೂ ಎನ್ಸಿಸಿ ನೇವಿ ಘಟಕದ Sub.Lt ಡಾ.ಗೀತಾ ತಳವಾರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆರೋಗ್ಯ ಇಲಾಖೆಯ ಹಾಗೂ ಕಾಲೇಜಿನ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು
ಸರಕಾರಿ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಇಂಗ್ಲೀಷ್ ಪ್ರಾಧ್ಯಾಪಕ ಹಾಗೂ ಎನ್.ಎಸ್.ಎಸ್ ಘಟಕಾಧಿಕಾರಿ ಬಸವರಾಜ ದಳವಾಯಿ ವಂದಿಸಿದರು, ವಿದ್ಯಾರ್ಥಿನಿ ಶ್ರೀನಿಧಿ ನಿರೂಪಿಸಿದರು.