ಕಾರವಾರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಗದ್ಗುರು ರೇಣುಕಾಚಾರ್ಯ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಅಪರ ಜಿಲ್ಲಾಧಿಕಾರಿ ಉದ್ಘಾಟಿಸಿದರು.
ಪ್ರೊಜೆಕ್ಟ ಸೀಬರ್ಡ ನೌಕಾನೆಲೆಯ ತಾಂತ್ರಿಕ ನಿರ್ದೇಶಕ ಶ್ರೀಕಂಠ ಚೌಕಿಮಠ , ಜಗದ್ಗುರು ರೇಣುಕಾಚಾರ್ಯ ರವರ ಕುರಿತು ಉಪನ್ಯಾಸ ನೀಡಿ, ಜಗದ್ಗುರು ರೇಣುಕಾಚಾರ್ಯರು ಕೇವಲ ವೀರಶೈವ ಸಮಾಜಕ್ಕೆ ಅಥವಾ ಒಂದು ಜಾತಿ ಧರ್ಮಕ್ಕೆ ಸಿಮೀತವಾಗದೇ ಸಮಗ್ರ ಮನುಕುಲಕ್ಕೆ ಹಾಗೂ ಮನು ಕುಲದ ಆಚಾರ, ವಿಚಾರ, ಸಂಸ್ಕೃತಿಗೆ ಸಂಬಂಧಿಸಿದವರು. ಇವರು ಆಂಧ್ರಪ್ರದೇಶದ ಕೊಲ್ಲಿಪಾಕ್‌ನಲ್ಲಿ ಜನ್ಮ ತಾಳಿ ಚಿಕ್ಕಮಗಳೂರಿನ ಬಾಳೆಹೊನ್ನೂರುಗೆ ಆಗಮಿಸಿ ರಂಭಾಪುರಿ ಪೀಠವನ್ನು ಸ್ಥಾಪಿಸಿ ಧರ್ಮ ಪ್ರಚಾರ ಮಾಡಿ ಭಾರತದ ಐದು ಕಡೆ ಪಂಚಪೀಠಗಳನ್ನು ಸ್ಥಾಪನೆ ಮಾಡಿದ್ದಾರೆ ಎಂದರು.
ಮನುಷ್ಯತ್ವವನ್ನು ಮಾನವನ್ನಾಗಿ, ಮಾನವನಿಂದ ಮಹಾದೇವನ್ನಾಗಿಸುವ ಕ್ರಿಯೆ ರೇಣುಕಾಚಾರ್ಯದವರದ್ದಾಗಿತ್ತು. ದೀನದಲಿತರಿಗೆ , ಬಡವರಿಗೆ 18 ಮಠಗಳನ್ನು ಸ್ಥಾಪಿಸಿ ಧರ್ಮಕ್ರಾಂತಿಯನ್ನು ಸಮಾಜದಲ್ಲಿ ಬಿತ್ತರಿಸಿದರು. ವೃತ್ತಿಯನ್ನು ಗೌರವಿಸಬೇಕು. ಚೈತನ್ಯ ಸ್ವರೂಪ, ಪ್ರಾಮಾಣಿಕತೆಯಿಂದ ಕೆಲಸವನ್ನು ಮಾಡಬೇಕು. ಪ್ರಮಾಣಿಕ ದುಡಿದು ತಿನ್ನಬೇಕು ಹಸಿದವರಿಗೂ ಅನ್ನ ನೀಡಬೇಕು ಎನ್ನುವುದು ಅವರ ಆಶಯವಾಗಿತ್ತು ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಲಾ ಎಂ. ನಾಯ್ಕ, ವೀರಶೈವ ಸಮಾಜದ ಮುಖಂಡ ಮಲ್ಲಿಕಾರ್ಜುನ ಹಿರೇಮಠ, ಸರಸ್ವತಿ ವಿದ್ಯಾಲಯದ ಶಿಕ್ಷಕ ಮಹಾದೇವ ರಾಣೆ, ಸಮಾಜದ ಬಂಧುಗಳು, ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.