ಸಿದ್ದಾಪುರ : ಇಂದು ಬಹಳಷ್ಟು ಕಡೆ ಮಹಿಳೆಯರಿಂದ ಪುರುಷರು ಶೋಷಣೆಗೆ ಒಳಗಾಗುತ್ತಿರುವ ಉದಾಹರಣೆಗಳಿವೆ. ಅಂತಹ ಶಕ್ತಿಯನ್ನು ನಾವು ಬೆಳೆಸಿಕೊಳ್ಳಬಾರದು. ಮಹಿಳೆರಲ್ಲಿರುವ ಮಮತೆ, ಸಹನೆ, ಕರುಣೆಯಂತಹ ಶಕ್ತಿಯನ್ನು ಒಳ್ಳೆಯದಕ್ಕೆ ಬಳಸಿಕೊಳ್ಳಬೇಕು. ಮಕ್ಕಳಿಗೆ ಒಳ್ಳೆಯ ಸಂಸ್ಕಾರವನ್ನು ಕೊಟ್ಟು, ಒಳ್ಳೆಯ ಪ್ರಜೆಗಳನ್ನಾಗಿ ಮಾಡಿದರೆ ಅದು ಕೂಡ ಮಹಿಳೆಯ ಒಂದು ಸಾಧನೆಯೇ. ಗಂಡು-ಹೆಣ್ಣು ಎಂದು ತಾರತಮ್ಯ ನಿಲುವನ್ನ ಕಡಿಮೆ ಮಾಡಬೇಕು. ಇಬ್ಬರು ಪೂರಕವಾಗಿ ಬದುಕೋಣ. ತಾಯಂದಿರು ಒಳ್ಳೆಯ ಮೌಲ್ಯವನ್ನು ಮಕ್ಕಳಲ್ಲಿ ತುಂಬಿದರೆ ಭವ್ಯ ಭಾರತವನ್ನು ನಿರ್ಮಾಣ ಮಾಡಬಹುದು ಎಂದು ಧನ್ವಂತರಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ರೂಪಾ ಭಟ್ ಅಭಿಪ್ರಾಯಪಟ್ಟರು.
ಅವರು ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ತಿನ ತಾಲೂಕು ಘಟಕದ ಉದ್ಘಾಟನೆ ಹಾಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ತಿನ ತಾಲೂಕು ಘಟಕದ ಗೌರವಾಧ್ಯಕ್ಷ ಎಮ್.ಕೆ. ನಾಯ್ಕ ಹೊಸಳ್ಳಿ ಮಾತನಾಡಿ ಮಹಿಳೆಯರು ಸಮಾಜಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸುವ ದಿನವಾಗಿದೆ. ಹೆಣ್ಣು ಮಕ್ಕಳಿಗೆ ಸಿಕ್ಕ ಶೈಕ್ಷಣಿಕ ಪ್ರಭಾವದಿಂದ ಇಂದು ಮಹಿಳೆ ಎಲ್ಲಾ ರಂಗದಲ್ಲಿ ಇದ್ದಾರೆ. ಎಲ್ಲರನ್ನೂ ಸಮಾನವಾದ ತಕ್ಕಡಿಯಲ್ಲಿ ನೋಡಿದರೆ ನಮ್ಮ ಬದುಕು ಸಾರ್ಥಕವಾಗುತ್ತದೆ. ಶಿಕ್ಷಣದಿಂದ ಮಾತ್ರ ನಮ್ಮ ಮೇಲಿನ ದೌರ್ಜನ್ಯ ವನ್ನು ತಡೆಗಟ್ಟಬಹುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷ ವೆಂಕಟೇಶ್ ಮಡಿವಾಳ ಮಾತನಾಡಿ ಸಿದ್ದೇಶ್ವರ ಗುರುಗಳ ಕನಸಿನ ಕೂಸು ಈ ಸಾಂಸ್ಕೃತಿಕ ಪರಿಷತ್ತು. ನಮ್ಮ ಜಿಲ್ಲೆ ಸಾಂಸ್ಕೃತಿಕ ಪರಿಷತ್ತು ಎಲೆಮರೆಯ ಕಾಯಿಯಂತಿರುವ ಸಾಧಕರನ್ನು ಗುರುತಿಸುವ ಕಾರ್ಯ ಮಾಡುತ್ತದೆ ಎಂದರು.
ಸಾಧಕಿ ಕುಸುಮಾ ಈಶ್ವರ ನಾಯ್ಕ ಮುಗದೂರ ರವರನ್ನು ಕಾರ್ಯಕ್ರಮ ದಲ್ಲಿ ಸನ್ಮಾನಿಸಲಾಯಿತು.
ವೈವಿಧ್ಯಮಯ ಕ್ಷೇತ್ರದಲ್ಲಿ ಮಹಿಳೆ ಎಂಬ ವಿಷಯದ ಮೇಲೆ ನಡೆದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.ಗುಲಾಬಿ ನಾಯ್ಕ ಪ್ರಾರ್ಥಿಸಿದರು.ಕೆ ಪಿ ಮಮತ ಸ್ವಾಗತಿಸಿದರು. ಪ್ರಥ್ವಿ ಎಚ್ ಎಸ್ ನಿರೂಪಿಸಿದರು. ಸುಮತಿ ನಾಯ್ಕ ವಂದಿಸಿದರು.