ಗೊಂದಲದ ಗೂಡಾಗಿರುವ ಬಿ ಖಾತಾ ಆದೇಶ | ಅಧಿಕಾರಿಗಳಿಗೆ ಮಾಹಿತಿ ಇಲ್ಲದೇ ಆದೇಶ
ಶಿರಸಿ: ಶಿರಸಿ ನಗರದಲ್ಲಿನ ಅನಧಿಕೃತ ನಿವೇಶನ, ಕಟ್ಟಡಗಳಿಗೆ ಬಿ ಖಾತಾ ನೀಡಲು ರಾಜ್ಯ ಸರ್ಕಾರ ಮಾಡಿದ ಆದೇಶವು ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸಿದ್ದು, ಇದರ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದರೂ ಸರಿಯಾದ ಮಾಹಿತಿ ನೀಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸ್ಪಷ್ಟ ಮಾಹಿತಿ ನೀಡಬೇಕು ಎಂದು ನಗರಸಭಾ ಸದಸ್ಯ ಹಾಗೂ ಬಿಜೆಪಿ ನಗರ ಮಂಡಲಾಧ್ಯಕ್ಷ ಆನಂದ ಸಾಲೇರ ಒತ್ತಾಯಿಸಿದರು.
ಅವರು ನಗರದ ದೀನದಯಾಳ ಸಭಾಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇ ಖಾತಾ ಎಂಬುದು ಗೊಂದಲದ ಗೂಡಾಗಿದೆ.ಆದರೆ, ಇದರಿಂದ ಆಸ್ತಿ ಪರಭಾರೆಗೆ, ನಗರ ಯೋಜನಾ ಪ್ರಾಧಿಕಾರದ ಅನುನತಿಗೆ ಯಾವುದೇ ಸೂಚನೆಗಳು ಇಲ್ಲದೇ ಜನತೆ ಗೊಂದಲದಲ್ಲಿದ್ದಾರೆ. ಬಿ ಖಾತೆ ಮಾಡಿದ ಭೂಮಿ ಅಥವಾ ಕಟ್ಟಡವನ್ನು ಇನ್ನೊಬ್ಬರಿಗೆ ಉಪನೋಂದಣಿ ಅಧಿಕಾರಿಗಳಲ್ಲಿ ದಾಖಲೀಕರಣ ಮಾಡಲು, ಪರಭಾರೆ ಮಾಡಲು ಆಗುತ್ತದೆಯೋ ಎಂದು ಕೇಳಿದರೆ ಉತ್ತರವಿಲ್ಲ. ೩ ತಿಂಗಳಿನೊಳಗಡೆ ಬಿ ಖಾತಾ ಮಾಡಬೇಕು ಎಂದು ಸುತ್ತೋಲೆ ಹೇಳಿದೆ. ಆದರೆ ಅದರ ಪ್ರಯೋಜನ ಪ್ರಶ್ನೆಯಾಗಿದೆ ಎಂದರು.
ಬಿ ಖಾತಾ ಮಾಡಿಕೊಂಡು ಬಂದರೆ ನಗರಪ್ರಾಧಿಕಾರದಿಂದ ಅನುಮತಿ ದೊರೆಯುವುದಿಲ್ಲ. ರಿಜಿಸ್ಟ್ರೇಷನ್ ಆಗುವುದಿಲ್ಲ. ಸಬ್ ರಿಜಿಸ್ಟಾರ್ನಲ್ಲಿ ನೋಂದಣಿಯಾಗುವುದಿಲ್ಲ ಎಂದು ತಿಳಿಸಿದ್ದಾರೆ. ಮುಂದಿನ ಬೆಳವಣಿಗೆ, ಪ್ರಯೋಜನ ಏನು ಎಂದು ಕೇಳಬೇಕಾಗಿದೆ ಎಂದ ಅವರು, ಈ ಆದೇಶದಿಂದ ಮುಂದಿನ ದಿನಗಳಲ್ಲಿ ಅಧಿಕೃತವಾಗುತ್ತದೆಯೋ ಅಥವಾ ಅನಧಿಕೃತವಾಗಿಯೋ ಉಳಿಯುತ್ತದೆಯೋ ಎಂಬ ಸ್ಪಷ್ಟ ಮಾಹಿತಿ ತಿಳಿಸುವಂತಾಗಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ಉಪಾಧ್ಯಕ್ಷ ರಮಾಕಾಂತ ಭಟ್, ಸದಸ್ಯರಾದ ವೀಣಾ ಶೆಟ್ಟಿ, ಗಣಪತಿ ನಾಯ್ಕ, ಮಾಂತೇಶ ಹಾದಿಮನಿ, ನಾಗರಾಜ ನಾಯ್ಕ, ಕಿರಣ ಶೆಟ್ಟಿ, ಪಕ್ಷದ ಪ್ರಮುಖರಾದ ನಂದನ ಸಾಗರ, ರವಿಚಂದ್ರ ಶೆಟ್ಟಿ ಮತ್ತಿತರರು ಇದ್ದರು.
ಕೋಟ್:
ಶಿರಸಿ ನಗರಸಭೆಗೆ ಸೇರಿದ ಕೆಂಗ್ರೆ ಮುಖ್ಯ ಕುಡಿಯುವ ನೀರು ಪೂರೈಕೆ ಪೈಪ್ ಕಳವು ಪ್ರಕರಣದ ತನಿಖೆಗೆ ನಗರಸಭೆಯು ಪ್ರಕರಣ ದಾಖಲಿಸದೇ ಹೋದರೆ ಎಲ್ಲ ೩೧ ಜನ ನಗರಸಭಾ ಸದಸ್ಯರು ಪೊಲೀಸ್ ದೂರು ದಾಖಲಿಸುತ್ತೇವೆ.
-ಆನಂದ ಸಾಲೇರ, ನಗರಸಭಾ ಸದಸ್ಯ ಹಾಗೂ ಬಿಜೆಪಿ ನಗರ ಮಂಡಲಾಧ್ಯಕ್ಷ