ಹೊನ್ನಾವರ : ರೋಟರಿ ಕ್ಲಬ್ ಹೊನ್ನಾವರ ಪ್ರಾಯೋಜಿಸಿದ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸಾ ಶಿಬಿರ ಫೆಬ್ರವರಿ 28 ರಿಂದ ಮಾರ್ಚ 3ರ ತನಕ ಹೊನ್ನಾವರದ ಸೆಂಟ್ ಇಗ್ನೇಷಿಯಸ್ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನಡೆಯಿತು. ಒಟ್ಟು 102 ಜನ ಫಲಾನುಭವಿಗಳಿಗೆ ಕಣ್ಣಿನ ತಪಾಸಣೆ ಮಾಡಲಾಯಿತು ಅವರಲ್ಲಿ 17 ಜನರಿಗೆ ಶಸ್ತ್ರ ಚಿಕಿತ್ಸೆಯನ್ನು ಉಡುಪಿಯ ಖ್ಯಾತ ನೇತ್ರ ತಜ್ಞರಾದ ಡಾ. ನರೇಂದ್ರ ಶೆಣೈ ಯಶಸ್ವಿಯಾಗಿ ನೆರವೇರಿಸಿದರು.
ಕಾರ್ಯಕ್ರಮ ಸಂಯೋಜಕರಾದ ರೋ. ಡಾ. ಕಿರಣ ಬಳ್ಕೂರ ಮುತುವರ್ಜಿವಹಿಸಿ ಜವಾಬ್ದಾರಿಯುತವಾಗಿ ಶಿಬಿರ ನಡೆಸಿಕೊಟ್ಟರು. ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಹೊನ್ನಾವರ ತಾಲೂಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಯಾದ ರೋ. ಡಾ. ರಾಜೇಶ ಕಿಣಿ ಅಧ್ಯಕ್ಷತೆವಹಿಸಿ ಮಾತನಾಡುತ್ತಾ ರೋಟರಿ ಕ್ಲಬ್ ಪ್ರತಿವರ್ಷ ಈ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ ಎಂದು ಹೇಳಿದರು ಮತ್ತು ಶಿಬಿರಾರ್ಥಿಗಳಿಗೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಕುರಿತು ಮಾಹಿತಿ ನೀಡಿದರು. ಸೆಂಟ್ ಇಗ್ನೇಷಿಯಸ್ ಆಸ್ಪತ್ರೆಯ ಸಿಸ್ಟರ್ ಸುಸಯ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ರೋಟರಿ ಅಧ್ಯಕ್ಷ ಸೂರ್ಯಕಾಂತ ಸಾರಂಗ್ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು. ರೋಟರಿ ಕ್ಲಬ್ನ ಹಿರಿಯ ರೋಟರಿಯನ್ನರುಗಳು ಉಪಸ್ಥಿತರಿದ್ದರು. ರೋ. ದಿನೇಶ ಕಾಮತ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಎಂ. ಎಂ. ಹೆಗಡೆ ವಂದಿಸಿದರು.