ದಾಂಡೇಲಿ : ನಗರದ ಹಳೆ ದಾಂಡೇಲಿಯ ಸಾರಿಗೆ ಡಿಪೋದಲ್ಲಿ ಸಾರಿಗೆ ಬಸ್ಸಿನ ಚಾಲಕನೋರ್ವ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸೋಮವಾರ ನಡೆದಿದೆ.
ದಾಂಡೇಲಿ ಸಾರಿಗೆ ಘಟಕದ ಸಿಟಿ ಬಸ್ಸಿನ ಚಾಲಕ ಆರ್.ಬಿ.ಗಿಡಜಾಡರ ಎಂಬವರೇ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯಾಗಿದ್ದಾರೆ. ಇವರು ಸಾರಿಗೆ ಡಿಪೋದಲ್ಲಿ ಪೀನಾಯಿಲ್ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದಾರೆ. ವಿಷಯ ತಿಳಿದ ಸಾರಿಗೆ ಘಟಕದ ಸಿಬ್ಬಂದಿಗಳು ತಕ್ಷಣವೇ ಸಾರಿಗೆ ಬಸ್ಸಿನಲ್ಲಿ ನಗರದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತಂದಿದ್ದಾರೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡಲಾಗಿ, ಹೆಚ್ಚಿನ ಚಿಕಿತ್ಸೆಗೆ ಧಾರವಾಡಕ್ಕೆ ರವಾನಿಸಲಾಗಿದೆ. ಸಾರ್ವಜನಿಕ ಆಸ್ಪತ್ರೆಗೆ ಸಾರಿಗೆ ಘಟಕದ ವ್ಯವಸ್ಥಾಪಕರಾದ ಎಲ್.ಎಚ್.ರಾಥೋಡ ಹಾಗೂ ಸಾರಿಗೆ ಘಟಕದ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ.
ಆತ್ಮಹತ್ಯೆಗೆ ಯತ್ನಿಸಲು ಕಾರಣಗಳೇನು? ಎನ್ನುವುದರ ಬಗ್ಗೆ ಪೊಲೀಸ್ ತನಿಖೆಯಿಂದ ಸ್ಪಷ್ಟ ಮಾಹಿತಿ ತಿಳಿದು ಬರಬೇಕಾಗಿದೆ.