ಸಿದ್ದಾಪುರ: ತಾಲೂಕಿನ ಇಟಗಿ ಗ್ರಾಪಂ ವ್ಯಾಪ್ತಿಯ ಹರಗಿಯ ಶಾರದಾ ಗಣಪತಿ ನಾಯ್ಕ ಎನ್ನುವವರ ಅಡಕೆ ತೋಟಕ್ಕೆ ಕಾಡು ಹಂದಿಗಳು ದಾಳಿ ನಡೆಸಿ ಅಂದಾಜು 125ಕ್ಕೂ ಹೆಚ್ಚು ಅಡಕೆ ಸಸಿಗಳನ್ನು ನಾಶಪಡಿಸಿದೆ.
ಕಷ್ಟ ಪಟ್ಟು ಅಡಕೆ ಸಸಿಗಳನ್ನು ನೆಟ್ಟಿದ್ದಿಲ್ಲದೇ ಕಾಡುಪ್ರಾಣಿಗಳ ಕಾಟ ಬಾರದಂತೆ ವ್ಯವಸ್ಥೆಯನ್ನು ಮಾಡಲಾಗಿತ್ತು. ಆದರೆ ನಾವು ಮಾಡಿರುವ ಎಲ್ಲ ವ್ಯವಸ್ಥೆಗಳು ಏನು ಪ್ರಯೋಜನಕ್ಕೆ ಬಾರದಂತಾಗಿದೆ. ಈ ಕುರಿತು ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ನೀಡುವುದರ ಜತೆಗೆ ಕಾಡುಪ್ರಾಣಿಗಳು ಗದ್ದೆ, ಅಡಕೆ ತೋಟಕ್ಕೆ ದಾಳಿ ನಡೆಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೃಷಿಕ ಹರೀಶ ನಾಯ್ಕ ಆಗ್ರಹಿಸಿದ್ದಾರೆ.
ಹಲವುದಿನಗಳಿಂದ ಕಾಡುಹಂದಿಗಳು ಇಟಗಿ, ಬಿಳಗಿ, ಹಾರ್ಸಿಕಟ್ಟಾ, ಕ್ಯಾದಗಿ, ದೊಡ್ಮನೆ, ಬಿದ್ರಕಾನ ಮತ್ತಿತರ ಗ್ರಾಪಂ ವ್ಯಾಪ್ತಿಯ ರೈತರ ಅಡಕೆ ತೋಟಕ್ಕೆ ಮಂಗಗಳ, ಕಾಡುಹಂದಿಗಳ ಹಾಗೂ ಕಾಡುಕೋಣಗಳ ಕಾಟ ವಿಪರೀತವಾಗುತ್ತಿದ್ದು ಇದರಿಂದ ಅಡಕೆ ಸಸಿ, ಗಿಡ, ಬಾಳೆ ಗಿಡಗಳನ್ನು ತಿಂದು ನಾಶಪಡಿಸುತ್ತಿದೆ.ಬೆಳೆಯನ್ನು ರಕ್ಷಿಸಿಕೊಳ್ಳುವುದೇ ಒಂದು ಸವಾಲಾಗಿದೆ ಎಂದು ಬೆಳೆಗಾರರು ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.
ತೋಟಕ್ಕೆ ಕಾಡುಹಂದಿಗಳ ದಾಳಿ: ಅಡಕೆ ಸಸಿಗಳು ನಾಶ
