Slide
Slide
Slide
previous arrow
next arrow

‘ಓದುವ ಹವ್ಯಾಸ ಪ್ರೋತ್ಸಾಹಿಸಲು ಅನೇಕ ಕಾರ್ಯಕ್ರಮಗಳು ಅನುಷ್ಠಾನಕ್ಕೆ ಬರಲಿದೆ’

300x250 AD

ಶಿರಸಿ: ಇಂದು ಪುಸ್ತಕ ಪ್ರಕಟಣೆಗಾಗಿ ಮುಂದೆ ಬರುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವ ಸಂಗತಿ ಆಶಾದಾಯಕವಾಗಿದೆ. ಕನ್ನಡ ಭಾಷೆಗೆ ಸಂದ ಗೌರವ ಇದಾಗಿದೆ. ಶಿರಸಿ ಸಾಂಸ್ಕೃತಿಕ ನಗರವಾಗಿ ಸಾಹಿತ್ಯದ ಕಾರ್ಯಕ್ರಮಗಳು ಬಹಳಷ್ಟು ನಡೆಯುತ್ತಿವೆ ಇದು ಒಳ್ಳೆಯ ಬೆಳವಣಿಗೆಯೂ ಆಗಿದೆ.  ಕಳೆದು ಹೋದ ಸಾಂಸ್ಕೃತಿಕ ವೈಭವದ ದಿನಗಳು ಮತ್ತೆ ಚಿಗುರೊಡೆದು ವಿಶಾಲ ವೃಕ್ಷದ ಮರುಹುಟ್ಟಿಗೆ ಕಾರಣವಾಗಿದ್ದು ಸಹೃದಯರ ಸ್ಪಂದನೆಗೆ ಸಾಕ್ಷಿಯಾಗಿದೆ. ಪುಸ್ತಕ ಓದುವ ಹವ್ಯಾಸವನ್ನು ಪ್ರೋತ್ಸಾಹಿಸುವುದಕ್ಕಾಗಿ ಸರ್ಕಾರದ ವತಿಯಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅನುಷ್ಠಾನಕ್ಕೆ ಬರಲಿರುವುದಾಗಿ ತಿಳಿದು ಬಂದಿದೆ ಎಂದು ಕಸಾಪ ಶಿರಸಿ ಅಧ್ಯಕ್ಷರಾದ  ಜಿ. ಸುಬ್ರಾಯ ಭಟ್ಟ ಬಕ್ಕಳ ಹೇಳಿದರು.

ಸಮನ್ವಯ ಚಾರಿಟೇಬಲ್ ಟ್ರಸ್ಟ್(ರಿ) ಶಿರಸಿ, ಸಾಹಿತ್ಯ ಸಂಚಲನ (ರಿ)ಶಿರಸಿ ಇವರ ಸಹಯೋಗದಲ್ಲಿ  ಕವಯಿತ್ರಿ ವಿಮಲಾ ಭಾಗ್ವತ ಅವರ ಶ್ರೀ ಕೃಷ್ಣ ಕಥಾಮಾಲಿಕೆ ಮತ್ತು ಮುಕ್ತಕ ಮಾಲೆ ಕೃತಿಗಳನ್ನು ಲೋಕಾರ್ಪಣೆ ಮಾಡಿ, ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಉದ್ಘಾಟನಾ ಭಾಷಣವನ್ನು ಈ ಮೇಲಿನಂತೆ ಮಾತನಾಡಿದರು.

ಶ್ರೀಕೃಷ್ಣ ಕಥಾಮಾಲಿಕೆ ಕೃತಿಯ ಪರಿಚಯವನ್ನು ಮಾಡಿದ ಚಿಂತಕ ಗಣಪತಿ ಭಟ್ಟ ವರ್ಗಾಸರ, ಇದೊಂದು ವೈಶಿಷ್ಟ್ಯಮಯವಾದ ಕೃತಿ ಕುಸುಮವಾಗಿದೆ. ಈ ಕೃತಿಯ ಅಂತರಂಗ ಶ್ರೀ ಕೃಷ್ಣನ ಬಾಲಲೀಲೆ, ಯೌವ್ವನ, ದುಷ್ಟರ ನಾಶ ಹಾಗೂ ಬದುಕಿನ ಅಗಾಧವಾದ ಶಕ್ತಿಯನ್ನು ಒಳಗೊಂಡು ಸಮಗ್ರ ಚಿಂತನೆಗೆ ಕಾರಣವಾಗಿದೆ. ನಂದಗೋಪ ಕುಮಾರನ, ನೀಲ ಮೇಘಶ್ಯಾಮನ ಬಾಲ ಲೀಲೆ ಮುಂತಾದವುಗಳು ಆಸಕ್ತಿಯನ್ನು ಹುಟ್ಟಿಸಿ ಚಿಂತನೆಗೆ ಗ್ರಾಸವಾಗಿದೆ. ಶ್ರೀಕೃಷ್ಣನ ವ್ಯಕ್ತಿತ್ವದ ಸಾರ ಸರ್ವಸ್ವವಾಗಿ ಅರ್ಜುನನಿಗೆ ವಿಶ್ವರೂಪ ದರ್ಶನ ಮಾಡಿಸಿ, ಭಗವದ್ಗೀತೆಯ ಮೂಲಕ ಕಣ್ಣು ತೆರಿಸಿದ್ದಾನೆ. ಗೆಳೆತನವನ್ನು ಸಾರುವ ಸುಧಾಮನ ಕಥೆ ಎಲ್ಲರ ಹೃನ್ಮನ ತಣಿಸುವುದಕ್ಕೆ ಕಾರಣವಾಗಿದೆ ಎಂದು ಹೇಳಿದರು.

 ಮುಕ್ತಕ ಮಾಲೆ ಕೃತಿಯನ್ನು ಪರಿಚಯಿಸಿದ ಕಥೆಗಾರ ರಾಜು ನಾಯ್ಕ ಬಿಸ್ಲಕೊಪ್ಪ, ಅಕ್ಷರಗಳಿಗೆ ಜೀವ ತುಂಬುವ ಕೆಲಸ ಈ ಕೃತಿಯಲ್ಲಾಗಿದೆ. ರಚನೆಗಳು ಜನಮಾನಸದಲ್ಲಿ ಶಾಶ್ವತವಾಗಿ ನಿಲ್ಲುವಂಥದ್ದಾಗಿದೆ. ಕವಯಿತ್ರಿ ತಮ್ಮ ಶ್ರಮದೊಂದಿಗೆ ಸಾರ್ಥಕತೆಯನ್ನು ಅನುಭವಿಸಿದ್ದಾರೆ. ಭಾವ ಪ್ರಪಂಚಕ್ಕೆ ತೆರಳದೆ ಸ್ವಾಭಿಮಾನದ ಬದುಕಿಗೆ ಹೊರಳಿ ಹೂರಣವನ್ನು ಹಂಚುವುದೇ ಕೃತಿಕಾರರ ಮನದಿಂಗಿತವಾಗಿದೆ ಎಂದು ಅರ್ಥಪೂರ್ಣವಾಗಿ ಮಾತನಾಡಿದರು.

 ಕೃತಿಕಾರಳಾದ ವಿಮಲಾ ಭಾಗ್ವತರು ತಾವು ಸವೆಸಿದ ಮಾರ್ಗ, ಸಾಹಿತ್ಯ ಪ್ರಪಂಚಕ್ಕೆ ಪಾದಾರ್ಪಣೆ, ಬದುಕು ಸುಂದರತ್ವದ  ಕಡೆಗೆ ತಲುಪಿದಾಗ ಆಗುವ ಆನಂದ, ನಿರ್ವಹಿಸಿದ ಜೀವನ ಪ್ರೀತಿ, ದುಃಖ, ನಿರಾಶೆಗಳನ್ನು ಮೆಟ್ಟಿ ನಿಂತು ಮುಂದುವರಿದಾಗ ಸಾಹಿತ್ಯ ಪ್ರಿಯರ ಅನುಗ್ರಹಕ್ಕೆ ಪಾತ್ರಳಾಗಿ ಪಡೆದ ಪುರಸ್ಕಾರ, ಗೌರವ, ಪ್ರಶಸ್ತಿ ಎಲ್ಲಾ ದೈವ ಸಂಕಲ್ಪದಂತೆ ನಡೆದದ್ದು. ಪ್ರೀತಿಯನ್ನು ಸಾಹಿತ್ಯದ ಮೂಲಕ ಹಂಚುವ ಪ್ರಯತ್ನ ಮಾಡಿದ್ದಾಗಿ ಹೇಳಿಕೊಂಡರು.

300x250 AD

 ಸಾಹಿತ್ಯ ಸಂಚಲನದ ಅಧ್ಯಕ್ಷರಾದ ಕೃಷ್ಣ ಪದಕಿ ಅವರು ಸಾಹಿತ್ಯ ಕಾರ್ಯಕ್ರಮಗಳ ನಿರಂತರತೆಯಿಂದಾಗಿ ಹೊಸ ಬರೆಹಗಾರರ ಪರಿಚಯವಾಗಿದೆ ಮತ್ತು ಬಹಳಷ್ಟು ಪ್ರತಿಭೆಗಳಿಗೆ ವೇದಿಕೆಯೊದಗಿಸಿ ಪ್ರೋತ್ಸಾಹಿಸಿದ ಸಂತೃಪ್ತಿ ನನಗಿದೆ ಎಂದು ಸಂತಸ ವ್ಯಕ್ತಪಡಿಸಿ ಕೃತಿಕಾರಳಿಗೆ ಅಭಿನಂದಿಸಿದರು.

 ಸಾಹಿತಿ ಡಾ.ಜಿ.ಎ ಹೆಗಡೆ ಸೊಂದಾ ಶುಭವನ್ನು ಕೋರುತ್ತಾ ಜ್ಞಾನಗಂಗೆ ಸದಾ ಹರಿಯುತ್ತಿರಲೆಂದರು. ಹಿರಿಯ ಸಾಹಿತಿ ಭಾಗೀರಥಿ ಹೆಗಡೆಯವರು ವಿಮಲಾ ಭಾಗ್ವತರನ್ನು ಸಾಹಿತ್ಯ ಸಂಚಲನದ ವತಿಯಿಂದ ಸನ್ಮಾನಿಸಿದರು. ಸಮನ್ವಯ ಟ್ರಸ್ಟ್ ವತಿಯಿಂದ ಪ್ರೊ ಡಿ.ಎಮ್. ಭಟ್ಟ ಕುಳುವೆ, ಜಿ ಸುಬ್ರಾಯ ಭಟ್ಟ ಬಕ್ಕಳ, ಕೃಷ್ಣ ಪದಕಿ, ಗಣಪತಿ ಭಟ್ಟ ವರ್ಗಾಸರ, ರಾಜು ನಾಯ್ಕ್, ಭವ್ಯಾ ಹಳೆಯೂರು ಅವರನ್ನು ಸನ್ಮಾನಿಸಲಾಯಿತು.

 ಅಧ್ಯಕ್ಷೀಯ ಭಾಷಣದಲ್ಲಿ ಪ್ರೊ. ಡಿ.ಎಮ್. ಭಟ್ಟ ಕುಳವೆಯವರು “ಬಹುಮುಖ ಪ್ರತಿಭೆಯ ವಿಮಲಾ ಭಾಗ್ವತ  ಸ್ವಾಭಿಮಾನದ ಬದುಕಿನಲ್ಲಿ ಸಾಹಿತ್ಯದ ಕೈಂಕರ್ಯವನ್ನು ಕೈಗೊಂಡವರು. ಅವರು ಬೆಂಕಿಯಲ್ಲಿ ಅರಳಿದ ಹೂವೆಂದರೆ ತಪ್ಪಾಗದು. ಸಮಾಜಮುಖಿ ಮನಸ್ಸಿನವರಾದ ಅವರು ಪ್ರೀತಿ-ವಿಶ್ವಾಸ, ಆತ್ಮವಿಶ್ವಾಸ ಜೀವನೋತ್ಸಾಹದ  ಪ್ರತೀಕವಾಗಿದ್ದಾರೆ, ಇವರ ಕೃತಿಗಳು ಕೇವಲ ಕೃತಿಯಾಗಿರದೆ ಎದೆಯ ಶ್ರುತಿಯಾಗಿದೆ, ಇವರ ಎಲ್ಲಾ ಕೃತಿಗಳಲ್ಲಿ ಜೀವನ ಸತ್ವವಿದೆ. ಒತ್ತಡದ ಬದುಕಿನಿಂದ ಪಾರಾಗಲು ಪುಸ್ತಕ ಪ್ರಪಂಚಕ್ಕೆ ಜಾರುವುದೇ ಒಂದು ಸಿದ್ದೌಷಧಿ ಎಂದು ಹೇಳುವ ಇವರದ್ದು ಹಲವು ಹವ್ಯಾಸಗಳು. ಸದಾ ಇವರ ಮನಸ್ಸು ತುಡಿಯುವುದು ಕಷ್ಟಜೀವಿಗಳ ಕಡೆಗೆ. ಜೀವನದಲ್ಲಿ ಶಾಂತಿ, ನೆಮ್ಮದಿ, ಸಾಮರಸ್ಯ, ಸಹಕಾರ, ಸಾದಾತನ ಚಿರಂತನವಾಗಿ ಇರಬೇಕೆನ್ನುವ ಮಾತಿನಲ್ಲಿ ಅರ್ಥವಿದೆ. ಇದೆ ಧರ್ಮವನ್ನು ಇವರು ಪಾಲಿಸಿಕೊಂಡು ಬಂದಿದ್ದಾರೆ. ಈ ಮೇಲಿನ ಎರಡು ಕೃತಿಗಳು ಇವರನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ದಿದೆ. ಸಾಹಿತ್ಯದ ಎಲ್ಲಾ ಅಂಶಗಳು ಸಮಗ್ರವಾಗಿ ಶಕ್ತಿಯನ್ನು ತುಂಬಿದೆ” ಎಂದರು.

 ಆರಂಭದಲ್ಲಿ ಕವಯತ್ರಿ ರಾಜಲಕ್ಷ್ಮಿ ಭಟ್ಟ ಬೊಮ್ನಳ್ಳಿ ಪ್ರಾರ್ಥಿಸಿದರು. ಜಗದೀಶ ಭಂಡಾರಿ ಅವರು ಸ್ವಾಗತಿಸಿ, ಪರಿಚಯಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಗಾಯಕ, ಬರಹಗಾರ ಎಸ್.ಎಂ.ಹೆಗಡೆ ವಂದಿಸಿದರು. ಅಂಕಣಗಾರ್ತಿ ಭವ್ಯ ಹಳೆಯೂರು ಕಾರ್ಯಕ್ರಮವನ್ನು ನಿರೂಪಿಸಿದರು.

Share This
300x250 AD
300x250 AD
300x250 AD
Back to top