- ಸಂದೇಶ್ ಎಸ್.ಜೈನ್, ದಾಂಡೇಲಿ
ಹಳಿಯಾಳ : ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ತಾಲೂಕಿನ ಪ್ರಖ್ಯಾತ ಜಾತ್ರೆಗಳಲ್ಲಿ ಒಂದಾಗಿರುವ ಮಂಗಳವಾಡ ಗ್ರಾಮದ ಶ್ರೀ ಲಕ್ಷ್ಮೀದೇವಿ (ದ್ಯಾಮವ್ವ) ದೇವಿಯ ಜಾತ್ರಾ ಮಹೋತ್ಸವವು ಫೆ.2 ರಂದು ಆರಂಭಗೊಂಡಿದ್ದು, ಫೆ.13ರಂದು ಮಹಾ ರಥೋತ್ಸವವು ನಢಯಲಿದೆ. ಫೆ.21 ರಂದು ಜಾತ್ರೆ ಸಂಪನ್ನಗೊಳ್ಳಲಿದೆ.
ಶ್ರೀದೇವಿಯ ಸನ್ನಿಧಿಯಲ್ಲಿ ಪ್ರತಿದಿನ ವಿಶೇಷ ಪೂಜಾರಾಧನೆಗಳು ನಡೆಯುತ್ತಿದೆ. ಮಂಗಳವಾಡ ಗ್ರಾಮದ ಪ್ರತಿ ಮನೆ ಮನೆಗಳಲ್ಲಿಯೂ ಸಂಭ್ರಮ ಮನೆ ಮಾಡಿದೆ. ಗ್ರಾಮದ ಪ್ರತಿ ಮನೆಗಳಿಗೂ ನೆಂಟರಿಷ್ಟರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಉಳಿದುಕೊಳ್ಳುವ ಮೂಲಕ ಶ್ರೀ ಲಕ್ಷ್ಮೀ ದೇವಿಯ ಜಾತ್ರೆಯಲ್ಲಿ ಸದಾ ಭಕ್ತಿಯಿಂದ ಭಾಗವಹಿಸುತ್ತಿದ್ದಾರೆ. ಮಂಗಳವಾಡ ಗ್ರಾಮದ ಜನತೆಯ ಮನ ಮನೆಗಳಲ್ಲಿ ಶ್ರೀ ಲಕ್ಷ್ಮೀ ದೇವಿಯ ಆರಾಧನೆ ನಡೆಯುತ್ತಿದೆ. ಗ್ರಾಮದೆಲ್ಲೆಡೆ ಸಂಭ್ರಮ ಸಡಗರ. ಇನ್ನೂ ಜಾತ್ರೆಯ ನಿಮಿತ್ತ ವಿವಿಧ ಅಂಗಡಿ – ಮುಗ್ಗಟ್ಟುಗಳು ಭಕ್ತ ಜನರನ್ನು ತನ್ನತ್ತ ಸೆಳೆಯುತ್ತಿವೆ.
ಶನಿವಾರ ಸಾರ್ವಜನಿಕರಿಂದ ಶ್ರೀ ಸ್ವಾಮಿ ಸನ್ನಿಧಿಯಲ್ಲಿ ಉಡಿ ತುಂಬುವ ಕಾರ್ಯಕ್ರಮ ಜರುಗಿತು. ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದ ಹಳಿಯಾಳದ ಹೊಂಗಿರಣ ಕಲಾ ತಂಡದಿಂದ ಮತ್ತು ಬಿ.ಕೆ ಹಳ್ಳಿಯ ಶ್ರೀ ಸಾಯಿ ಭಜನಾ ಮಂಡಳಿಯವರಿಂದ ಸಂಗೀತ ಭಜನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಸರ್ವಧರ್ಮಿಯರು ಶ್ರೀ ಸ್ವಾಮಿ ಸನ್ನಿಧಿಗೆ ಆಗಮಿಸಿ, ಶ್ರೀ ಸ್ವಾಮಿಯ ಕೃಪೆಗೆ ಪಾತ್ರರಾಗುತ್ತಿರುವುದು ಇಲ್ಲಿಯ ವಿಶೇಷ. ಜಾತ್ರೋತ್ಸವದ ಯಶಸ್ಸಿಗೆ ದೇವಸ್ಥಾನದ ಆಡಳಿತ ಸಮಿತಿ, ಜಾತ್ರೋತ್ಸವ ಸಮಿತಿ ಅತ್ಯಂತ ಉತ್ಸಾಹದಿಂದ ಶ್ರಮಿಸುತ್ತಿದೆ. ಮಂಗಳವಾಡ ಗ್ರಾಮಸ್ಥರು ಪರಸ್ಪರ ಭೇದಭಾವ ಮರೆತು ಒಂದಾಗಿ ಸಾಮರಸ್ಯದಿಂದ ಜಾತ್ರೋತ್ಸವದ ಯಶಸ್ವಿಗಾಗಿ ತಮ್ಮನ್ನು ತಾವು ಭಕ್ತಿ ಮನಸ್ಸಿನಿಂದ ಸಮರ್ಪಿಸಿಕೊಂಡಿದ್ದಾರೆ.
ಶಾಂತಿಯುತ ಜಾತ್ರೋತ್ಸವದ ಆಚರಣೆಗೆ ಪೊಲೀಸ್ ಇಲಾಖೆಯು ವಿಶೇಷ ಭದ್ರತಾ ವ್ಯವಸ್ಥೆಯನ್ನು ಒದಗಿಸಿದೆ. ಭಕ್ತಾದಿಗಳಿಗೆ ಆರೋಗ್ಯ ಸೇವೆಯನ್ನು ನೀಡಲು ಸಾರ್ವಜನಿಕ ಆರೋಗ್ಯ ಇಲಾಖೆಯು ತನ್ನನ್ನು ತಾನು ತೊಡಗಿಸಿಕೊಂಡಿದೆ. ಸ್ಥಳೀಯ ಗ್ರಾಮ ಪಂಚಾಯತ್ ಹಾಗೂ ತಾಲೂಕಾಡಳಿತವು ಜಾತ್ರೋತ್ಸವದ ಯಶಸ್ಸಿನಲ್ಲಿ ಭಾಗಿಯಾಗುತ್ತಿದೆ. ನಿರಂತರವಾಗಿ ವಿದ್ಯುತ್ ಸೇವೆಯನ್ನು ನೀಡಲು ಹೆಸ್ಕಾಂ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದೆ. ಕುಡಿಯುವ ನೀರು ಪೂರೈಕೆಯಲ್ಲಿ ಗ್ರಾಮ ಪಂಚಾಯತ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಒಟ್ಟಿನಲ್ಲಿ ಮಂಗಳವಾಡ ಗ್ರಾಮದ ಜಾತ್ರೆ ಹಳಿಯಾಳದ ಜನತೆಯ ಹಬ್ಬವಾಗಿ ಪರಿಣಮಿಸಿದೆ.