ಶಿರಸಿ: ದಿ ತೋಟಗಾರ್ಸ ಕೋ-ಆಪರೇಟಿವ್ ಸೇಲ್ ಸೊಸೈಟಿ ಪ್ರಧಾನ ಕಛೇರಿಯ ಆವರಣದಲ್ಲಿ ಸಂಘದ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಇದರಲ್ಲಿ ಎಸ್.ಎಸ್.ಎಲ್.ಸಿ., ಪಿ.ಯು.ಸಿ. ದ್ವೀತೀಯ, ಪದವಿ, ಸ್ನಾತಕೋತ್ತರ ಪದವಿ ಹಾಗೂ ಪ್ರೊಪೆಷನಲ್ ಕೋರ್ಸ್ಗಳಲ್ಲಿ ಹೆಚ್ಚು ಅಂಕಗಳಿಸಿದ 376 ಮಕ್ಕಳಿಗೆ ಒಟ್ಟೂ ರೂ. 9,57,100/- ಮೊತ್ತದ ವಿದ್ಯಾರ್ಥಿ ವೇತನ ನೀಡಲಾಯಿತು.
ಟಿ.ಎಸ್.ಎಸ್. ಉಪಾಧ್ಯಕ್ಷರಾದ ಮಹಾಬಲೇಶ್ವರ ಎನ್. ಭಟ್ಟ ತೋಟಿಮನೆ ಪ್ರಾಸ್ತಾವಿಕವಾಗಿ ವಿದ್ಯಾರ್ಥಿ ಜೀವನದ ಮಹತ್ವ, ಸಂಘದವತಿಯಿಂದ ಶಿಕ್ಷಣಕ್ಕೆ ಉತ್ತೇಜಿಸುತ್ತಿರುವುದು. ಒಳ್ಳೆಯ ಸಂಸ್ಕಾರಗಳನ್ನು ಹೊಂದುವುದು ಮತ್ತು ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ವಿಚಾರವಾಗಿ ಅತ್ಯಂತ ಮಾರ್ಮಿಕವಾಗಿ ವಿದ್ಯಾರ್ಥಿಗಳ ಮನ ಮುಟ್ಟುವಂತೆ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಗರಸಭೆ ಉಪಾಧ್ಯಕ್ಷ ರಮಾಕಾಂತ ಭಟ್ ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಮಾರ್ಗದರ್ಶನ ಅತ್ಯಂತ ಅವಶ್ಯಕ ಮತ್ತು ಇಂದಿನ ಮಕ್ಕಳು ಶೈಕ್ಷಣಿಕವಾಗಿ ಉತ್ತಮ ಪ್ರದರ್ಶನ ತೋರುತ್ತಿರುವುದು ಮತ್ತು ಟಿ.ಎಸ್.ಎಸ್. ವಿದ್ಯಾರ್ಥಿಗಳನ್ನು ಪ್ರೋತ್ರಾಹಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಸಂತಸ ವ್ಯಕ್ತಪಡಿಸಿದರು.
ಸಂಘದ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಮಾತನಾಡಿ ವಿದ್ಯಾರ್ಥಿ ಜೀವನ ಮತ್ತು ವಿದ್ಯಾರ್ಥಿ ವೇತನದ ಹಾಗೂ ಸಂಘದ ವತಿಯಿಂದ ವಾರ್ಷಿಕವಾಗಿ ಶಿಕ್ಷಣ ಕ್ಷೇತ್ರಕ್ಕೆ ವಿವಿಧ ರೂಪದಲ್ಲಿ ನೀಡುತ್ತಿರುವ ಕೊಡುಗೆಗಳ ಕುರಿತು ಸಭೆಗೆ ವಿವರಿಸಿದರು.
ವಿದ್ಯಾರ್ಥಿಗಳ ಪರವಾಗಿ ಪವನಕುಮಾರ ಹೆಗಡೆ ತಟ್ಟಿಕೈ ವಿದ್ಯಾರ್ಥಿ ವೇತನ ಸ್ವೀಕರಿಸಿ ಧನ್ಯವಾದ ತಿಳಿಸಿದರು. ಪಾಲಕರ ಪರವಾಗಿ ದಿನೇಶ ಭಾಗ್ವತ್ ಶಿರಸಿ, ಲಕ್ಷ್ಮಣ ನಾಯ್ಕ ಸಿದ್ದಾಪುರ, ಹಾಗೂ ಕೆಲವರು ಮಾತನಾಡಿ ಸಂಘದ ಕಾರ್ಯವನ್ನು ಕೊಂಡಾಡಿದರು.
ಸಂಘದ ಸಿಬ್ಬಂದಿ ಉದಯ ಹೆಗಡೆ ಹಲ್ಲುಸರಿಗೆ ಇವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಿಸಲ್ಪಟ್ಟಿತು. ಟಿ.ಎಸ್.ಎಸ್. ನಿರ್ದೇಶಕ ಅಶೋಕ ಗೌರೀಶ ಹೆಗಡೆ ಸ್ವಾಗತಿಸಿದರು. ಟಿ.ಎಸ್.ಎಸ್. ನಿರ್ದೇಶಕಿ ಶ್ರೀಮತಿ ನಿರ್ಮಲಾ ರಾಘವ ಹೆಗಡೆ ವಂದಿಸಿದರು. ಟಿ.ಎಸ್.ಎಸ್. ಪ್ರಧಾನ ವ್ಯವಸ್ಥಾಪಕ ಗಿರೀಶ ಹೆಗಡೆ, ಟಿ.ಎಸ್.ಎಸ್. ನ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿಗಳು, ಸದಸ್ಯರು, ವಿದ್ಯಾರ್ಥಿಗಳು, ಪಾಲಕರು ಸದಸ್ಯರು ಉಪಸ್ಥಿತರಿದ್ದರು.