ಸಿದ್ದಾಪುರ: ಸಂಸ್ಕಾರ ಇಲ್ಲದ ಬದುಕು ಬದುಕೇ ಅಲ್ಲ. ವಿಕೃತಿಯಿಂದ ಸಂಸೃತಿಯೆಡೆಗೆ ಮನುಷ್ಯ ತನ್ನ ಬದುಕನ್ನು ಬದಲಾಯಿಸಿಕೊಳ್ಳಬೇಕು. ಸಂಸ್ಕಾರಯುತ ಜೀವನ ಶೈಲಿಗೆ ಸಂಸ್ಕೃತಿ ಎನ್ನುತ್ತಾರೆ ಎಂದು ಚೈತನ್ಯ ರಾಜಾರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಭಾರತಿ ಸ್ವಾಮಿಗಳು ಹೇಳಿದರು.
ಪಟ್ಟಣದ ಐತಿಹಾಸಿಕ ನೆಹರೂ ಮೈದಾನದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡ ಸಿದ್ದಾಪುರ ಉತ್ಸವ -2025 ಕಾರ್ಯಕ್ರಮವನ್ನು ಉದ್ಘಾಟಿಸಿ ಶನಿವಾರ ಅವರು ಮಾತನಾಡಿದರು.
ಇಂದಿನ ಸಂಸ್ಕಾರ ರಹಿತ ಶಿಕ್ಷಣ ಪದ್ಧತಿ ನಮ್ಮನ್ನು ಸಾಕ್ಷರರನ್ನಾಗಿ ಮಾಡುತ್ತಿರುವುದರ ಜೊತೆಗೆ ರಾಕ್ಷಸರನ್ನಗೂ ಮಾಡುತ್ತಿದೆ. ಹಣ ಮತ್ತು ಅಧಿಕಾರದಿಂದ ಮನುಷ್ಯ ನೆಮ್ಮದಿ ಪಡೆಯಲಾರ. ನಿಷ್ಕಲ್ಮಶ ಹೃದಯ ಹೊಂದಿದ ವ್ಯಕ್ತಿ ನೆಮ್ಮದಿ ಪಡೆಯಲು ಸಾಧ್ಯ. ಪ್ರಕೃತಿ ನಮಗೆ ದಾನದ ಪಾಠವನ್ನು ಹೇಳುತ್ತದೆ. ಮಕ್ಕಳಿರುವಾಗಲೇ ಈ ಸಂಸ್ಕೃತಿ ಎಂಬ ಬೀಜವನ್ನು ಅವರ ಹೃದಯದಲ್ಲಿ ನೆಡಬೇಕು ಎಂದರು.
ಅತಿಥಿಗಲಾಗಿ ಪಾಲ್ಗೊಂಡ ಸ್ಥಳೀಯ ಶಿಕ್ಷಣ ಪ್ರಸಾರಕ ಸಮಿತಿಯ ಕಾರ್ಯಾಧ್ಯಕ್ಷ ಶಶಿಭೂಷಣ ಹೆಗಡೆ ಮಾತನಾಡಿ ಇಲ್ಲಿ ಪ್ರತಿ ಸಮುದಾಯವು ಒಂದು ವಿಶೇಷವಾದ ಕಲೆಯನ್ನು, ಸಂಸ್ಕೃತಿಯನ್ನು ಪೋಷಿಸಿಕೊಂಡು ಬಂದಿದೆ. ಪ್ರವಾಸೋದ್ಯಮದ ಕಲ್ಪನೆ ಬದಲಾಗುತ್ತಿದೆ. ಮೊದಲು ಜನ ದೇವಸ್ಥಾನಗಳನ್ನು, ಪರ್ವತಗಳನ್ನು, ಸಮುದ್ರವನ್ನು ನೋಡಲು ಬರುತ್ತಿದ್ದರು. ಆದರೆ ಇಂದು ವಿವಿಧ ಸಂಸ್ಕೃತಿಗಳ, ತಿಂಡಿ- ತಿನಿಸುಗಳ ಪರಿಚಯಕ್ಕಾಗಿ ಜನ ಬರುವಂತಹ ಪ್ರವಾಸೋದ್ಯಮದ ಕಾಲ ಬಂದಿದೆ. ಬರುವಂತಹ ದಿನಗಳಲ್ಲಿ ಸಿದ್ದಾಪುರ ಉತ್ಸವ ನಮ್ಮ ನಾಡಿನ ಕಲಾ ಶ್ರೀಮಂತಿಕೆಯನ್ನು ಜಗತ್ತಿನ ಎದುರು ತೆರೆದಿಡುವಂತಹ ಒಂದು ದೊಡ್ಡ ಪ್ರದರ್ಶನ ವೇದಿಕೆಯಾಗಬೇಕು ಎಂದರು.
ಶಿರಸಿ ಜೀವಜಲ ಪಡೆಯ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ, , ಉದ್ಯಮಿ ಉಪೇಂದ್ರ ಪೈ ಸಭೆಯಲ್ಲಿದ್ದು ಮಾತನಾಡಿದರು.
ಸಭೆಯಲ್ಲಿ ಉತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ಸತೀಶ ಹೆಗಡೆ ಬೈಲಳ್ಳಿ, ವಿಜಯ ಪ್ರಭು, ಉಪಾಧ್ಯಕ್ಷ ನಾಗರಾಜ ನಾಯ್ಕ ಬೇಡ್ಕಣಿ ಮತ್ತು ಪದಾಧಿಕಾರಿಗಳು ಇದ್ದರು. ಉತ್ಸವ ಸಮಿತಿಯ ಅಧ್ಯಕ್ಷ ಕೆ ಜಿ ನಾಯ್ಕ ಹಣಜೀಬೈಲ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.