ಸಿದ್ದಾಪುರ: ರಸ್ತೆ ಸುರಕ್ಷಾ ನಿಯಮಪಾಲನೆ ಕಡ್ಡಾಯವಾಗಬೇಕು. ಎಲ್ಲರೂ ಅದನ್ನು ಶಿಸ್ತಿನಿಂದ ಪಾಲಿಸಬೇಕು. ರಸ್ತೆ ಅಪಘಾತ ತಪ್ಪಿಸಲು ನಿಯಮ ಪಾಲನೆಯನ್ನು ತಪ್ಪದೇ ಪಾಲಿಸುವಂತಾದರೆ ಎಲ್ಲರಗೂ ಕ್ಷೇಮ ಎಂದು ತಹಶೀಲದಾರ ಎಂ.ಆರ್. ಕುಲಕರ್ಣಿ ಹೇಳಿದರು.
ಅವರು ಸ್ಥಳೀಯ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಮಿತಿಯ ಆಶ್ರಯದಲ್ಲಿ ಆರಕ್ಷಕ ಇಲಾಖೆಯ ಅಡಿಯಲ್ಲಿ ಆಚರಿಸಲಾದ ರಸ್ತೆ ಸುರಕ್ಷಾ ಮಾಸಾಚರಣೆ ಅಂಗವಾಗಿ ಏರ್ಪಡಿಸಿದ ರಸ್ತೆ ಸುರಕ್ಷತಾ ಜಾಥಾವನ್ನು ಉದ್ಘಾಟಿಸಿ ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ನಾಯ್ಕ ಕಾನಗೋಡ ಅವರು ಮಾತನಾಡಿ ಮಾನವ ಜೀವನ ಅಮೂಲ್ಯ. ತಮ್ಮ ಜೀವನದ ಸುಖ ಸಂತೋಷವನ್ನು ಅನುಭವಿಸಲು, ಅಂಗವಿಕಲತೆಯಿಂದ ದೂರವಿರಲು ನಿಯಮಪಾಲನೆ ಅನುಸರಿಸಬೇಕು. ಮಕ್ಕಳು ರಸ್ತೆ ಸುರಕ್ಷತಾ ನಿಯಮವನ್ನು ಅರಿಯಬೇಕು ಎಂದು ಹೇಳಿದರು.
ಭಾರತ ಸ್ಕೌಟ್ಸ್ ಗೈಡ್ಸ್ ಸಮಿತಿ ಅಧ್ಯಕ್ಷ ಜಿ.ಜಿ. ಹೆಗಡೆ ಬಾಳಗೋಡ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಲಕ್ಷಾಂತರ ಜನ ಅಪಘಾತಕ್ಕೆ ಬಲಿಯಾಗಿ ತಮ್ಮ ಜೀವನವನ್ನು ನಾಶ ಮಾಡಿಕೊಳ್ಳುತ್ತಾರೆ. ಮಕ್ಕಳು ರಸ್ತೆ ನಿಯಮ ಅರಿತರೆ ಭಾವಿ ಪ್ರಜೆಗಳಾದ ಬಳಿಕ ರಸ್ತೆ ಸುರಕ್ಷತಾ ನಿಯಮ ಪಾಲನೆ ಅನುಸರಿಸಲು ಸಾಧ್ಯ ಎಂದರು.
ಪಿ.ಎಸ್.ಐ. ಅನಿಲ, ಸ್ಕೌಟ್ಸ್ ಮತ್ತು ಗೈಡ್ಸ್ ಸಮಿತಿ ಕಾರ್ಯದರ್ಶಿ ಜಿ. ಜಿ. ಹೆಗಡೆ ಮಕ್ಕಿಗದ್ದೆ, ಕೋಶಾಧ್ಯಕ್ಷ ಮಹೇಶ ಶೇಟ್, ಮಂಜುನಾಥ ಶಾಸ್ತಿç, ರಾಜೀವ ಶಾನಭಾಗ, ಪದ್ಮಾವತಿ ನಾಯ್ಕ, ಕವಿತಾ ಶೇಟ್, ವಿ.ಟಿ. ನಾಯ್ಕ, ರವೀಂದ್ರ ನಾಯ್ಕ, ಸಿ.ಆರ್.ಪಿ. ಶೋಭಾ ಡಿ.ಸಿ., ಹರ್ಷಾ ಚಂದಾವರ ಅವರು ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಎಂ.ವಿ. ನಾಯ್ಕ ಸ್ವಾಗತಿಸಿ ನಿರೂಪಿಸಿ ವಂದಿಸಿದರು.