Slide
Slide
Slide
previous arrow
next arrow

ಶಂಕರಮಠದಲ್ಲಿ ಮೇಧಾ ಜೊತೆ ರಾಮಕೃಷ್ಣ ವಿವಾಹ ಸಂಭ್ರಮ

300x250 AD

ಸನಾತನ ಆಶಯ ಮರುನಿರೂಪಿಸಿದ ವಿವಾಹ, ಯಜ್ಞ, ಸುಭಗ, ಚಿಂತನ ವೇದಿಕೆಗಳು

ಸಿದ್ದಾಪುರ: ಭಾರತೀಯ ಪರಂಪರೆಯಲ್ಲಿ ವಿವಾಹ ಸಂದರ್ಭದಲ್ಲಿ ಅಡಕಗೊಂಡಿರುತ್ತಿದ್ದ, ಶಾಸ್ತ್ರಗಳಲ್ಲೂ ಉಲ್ಲೇಖವಾದ ಕೆಲವು ವಿಶಿಷ್ಟತೆಯನ್ನು ಸಂಯೋಜಿಸಿದ ವಿವಾಹ ಸೋಮವಾರ ಪಟ್ಟಣದ ಶಂಕರಮಠದಲ್ಲಿ ವಿದ್ವಾಂಸರ, ಗಣ್ಯರ ಹಾಗೂ ನೆಂಟರಿಷ್ಟರ ಉಪಸ್ಥಿತಿಯಲ್ಲಿ ಸಂಭ್ರಮದಿಂದ ನಡೆಯಿತು.

ವಿದ್ವಾಂಸ, ಗ್ರಂಥಕರ್ತ ವೇ. ವಿಶ್ವನಾಥ ಭಟ್ಟ ಗೋಳಿಕೈ ಹಾಗೂ ಮಮತಾ ಭಟ್ಟ ದಂಪತಿಯ ಪ್ರಥಮ ಪುತ್ರಿ ಮೇಧಾ ಹಾಗೂ ನಾರಾಯಣ ಭಟ್ಟ ಅಸ್ತಾಳ ಹಾಗೂ ವೀಣಾ ಭಟ್ಟ ದಂಪತಿಯ ಪುತ್ರ ರಾಮಕೃಷ್ಣ ಇವರ ವಿವಾಹ ಸಂದರ್ಭದಲ್ಲಿ ಕಣ್ಮರೆಯಾಗಿ ಹೋದ ಸನಾತನ ಆಶಯಗಳನ್ನು ಮರುನಿರೂಪಿಸಿದರು.
ಈ ವಿವಾಹ ಸಂದರ್ಭದಲ್ಲಿ ವಿವಾಹ ವೇದಿಕೆ, ಯಜ್ಞ ವೇದಿಕೆ, ಸುಭಗ ವೇದಿಕೆ ಹಾಗೂ ಚಿಂತನ ವೇದಿಕೆ ಎನ್ನುವ 4 ವೇದಿಕೆಗಳನ್ನು ಸಿದ್ಧಪಡಿಸಿ ವಿವಾಹಕ್ಕೆ ಸಂಬಂಧಿಸಿದ ವಿಧಿವಿಧಾನಗಳು ಜರುಗಿದವು. ಯಜ್ಞ ವೇದಿಕೆಯಲ್ಲಿ ಗೃಹಸ್ಥರಾದವರು ಮಧುರ ದಾಂಪತ್ಯಕ್ಕಾಗಿ ಔಪಾಸನಾ ಅಗ್ನಿ ಉಪಾಸನೆ ಮಾಡಬೇಕು ಎಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಿದಂತೆ ವಿಶ್ವನಾಥ ಭಟ್ಟ ದಂಪತಿ ಕಳೆದ 20 ವರ್ಷಗಳಿಗೂ ಹೆಚ್ಚುಕಾಲದಿಂದ ಈವರೆಗೂ ಪ್ರತಿದಿನ ಅಗ್ನಿಯನ್ನು ಕಾದಿಟ್ಟುಕೊಂಡು ಬಂದು ನಡೆಸಿದ ಔಪಾಸನಾ ಹೋಮ ಮತ್ತು ವೈಶ್ವದೇವ ಹೋಮ ಜರುಗಿದವು. ಆ ವೇದಿಕೆಯಲ್ಲಿ ಸ್ಮಾರ್ತಯಜ್ಞದಲ್ಲಿ ಬಳಕೆಯಾಗುವ ಪಾತ್ರೆ, ಪರಿಕರಗಳನ್ನು ಇಟ್ಟಿರುವುದು ವಿಶೇಷವಾಗಿತ್ತು.
ಹಿಂದೆ ವಿವಾಹಗಳು ಗೋವುಗಳ ಸನ್ನಿಧಿಯಲ್ಲೇ ಜರುಗುತ್ತಿತ್ತು ಎನ್ನುವ ಶಾಸ್ತçಗಳ ಉಲ್ಲೇಖದ ಹಿನ್ನೆಲೆಯಲ್ಲಿ ಸಿದ್ಧಗೊಳಿಸಿದ ಸುಭಗ ವೇದಿಕೆಯಲ್ಲಿ ವಿಶ್ವನಾಥ ಭಟ್ಟರ ಕಪಿಲಾ ಹಸುವೂ ಸೇರಿದಂತೆ ಮನೆಯಲ್ಲಿ ಸಾಕಿದ ದೇಸಿ ಗೋವುಗಳ ಸಾನಿಧ್ಯವಿತ್ತು. ಇತ್ತೀಚೆಗೆ ವರನ ಬಳುವಳಿಗೆ ಗೋವಿನ ಚಿಕ್ಕ ಮೂರ್ತಿ ಅಥವಾ ಧನವನ್ನು ನೀಡುವ ಬದಲಾಗಿ ಸಾಕ್ಷಾತ್ ಗೋವು ಮತ್ತು ಕರುವನ್ನು ವಿಶ್ವನಾಥ ಭಟ್ಟ ದಂಪತಿ ಬಳುವಳಿ ನೀಡಿದರು.
ಈಗಾಗಲೇ ಹಲವು ಮುದ್ರಣಗಳನ್ನು ಕಂಡು, ನಾಡಿನಾದ್ಯಂತ ಪ್ರಸಿದ್ಧವಾಗಿರುವ ಸದ್ಗತಿ, ಕಪಿಲಾ ಗೋವನ್ನು ಹೇಗೆ ಗುರುತಿಸುವದು ಎನ್ನುವ ಕಪಿಲಾದರ್ಶನ ಹಾಗೂ ಉತ್ತರಕ್ರಿಯಾ ಪ್ರಯೋಗ ಕೃತಿಗಳು, ಈ ಕೃತಿಗಳ ಕುರಿತು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿ, ಲೇಖನಗಳು ಚಿಂತನಾ ವೇದಿಕೆಯಲ್ಲಿದ್ದವು. ಕಣ್ಮರೆಯಾಗಿರುವ ಸನಾತನ ಧರ್ಮದ, ಭಾರತೀಯ ಸಂಸ್ಕೃತಿಯ ವಿಶಿಷ್ಟತೆಯನ್ನು ಸ್ವತ: ತಾವೇ ಅನುಸರಿಸುವ ಮೂಲಕ ಸಮಾಜಕ್ಕೆ ಮನಗಾಣಿಸಿದ್ದು ವಿಶ್ವನಾಥ ಭಟ್ಟ ದಂಪತಿ ಅವರ ಕಳಕಳಿಗೆ ಸಾಕ್ಷಿಯಾಗಿತ್ತು. ವಿಶ್ವನಾಥ ಭಟ್ಟರ ಮಾರ್ಗದರ್ಶಕರಾಗಿರುವ ಪ್ರಖರ ವಿದ್ವಾಂಸ, ನಿವೃತ್ತ ಸಂಸ್ಕೃತ ಪ್ರಾಧ್ಯಾಪಕ ವಿ. ಗಂಗಾಧರ ಭಟ್ಟ ಅಗ್ಗೆರೆಯವರು ಸೇರಿದಂತೆ ಅನೇಕ ವಿದ್ವಾಂಸರು, ವೈದಿಕರು ಈ ವೈಶಿಷ್ಟ್ಯಪೂರ್ಣ ಕಾರ್ಯಕ್ರಮದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಐದು ನೂರಕ್ಕೂ ಹೆಚ್ಚು ಅವರ ನೆಂಟರಿಷ್ಟರು, ಹಿತೈಷಿಗಳು ಪಾಲ್ಗೊಂಡು ನವದಂಪತಿಗಳಿಗೆ ಶುಭಹಾರೈಸಿದರು.

300x250 AD

Share This
300x250 AD
300x250 AD
300x250 AD
Back to top