Slide
Slide
Slide
previous arrow
next arrow

ಉತ್ತರ ಕನ್ನಡ ಜಿಲ್ಲೆಯು ಮಾದಕ ವಸ್ತು ಮುಕ್ತವಾಗಬೇಕು: ಅಧಿಕಾರಿಗಳಿಗೆ ಡಿಸಿ ಸೂಚನೆ

300x250 AD

ಕಾರವಾರ: ಉತ್ತರಕನ್ನಡ ಜಿಲ್ಲೆಯ ಯಾವುದೇ ಪ್ರದೇಶದಲ್ಲಿ ಮಾದಕ ವಸ್ತುಗಳ ಮಾರಾಟ, ಬಳಕೆ, ಸರಬರಾಜು ನಡೆಯದಂತೆ ಅತ್ಯಂತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡು, ಎಚ್ಚರವಹಿಸುವ ಮೂಲಕ ಜಿಲ್ಲೆಯನ್ನು ಮಾದಕ ವಸ್ತು ಮುಕ್ತ ಜಿಲ್ಲೆಯನ್ನಾಗಿಸಬೇಕು ಎಂದು ಪೊಲೀಸ್, ಅಬಕಾರಿ, ಆರಣ್ಯ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಸೂಚನೆ ನೀಡಿದರು.

ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಎನ್ಕಾರ್ಡ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯ ಗಡಿ ಪ್ರದೇಶದಲ್ಲಿ ಪೊಲೀಸ್, ಅಬಕಾರಿ, ಆರ್.ಟಿ.ಓ ಅಧಿಕಾರಿಗಳು ವಾಹನಗಳನ್ನು ಕಟ್ಟುನಿಟ್ಟಿನ ತಪಾಸಣೆ ನಡೆಸುವ ಮೂಲಕ ಮಾದಕ ವಸ್ತುಗಳು ಜಿಲ್ಲೆಗೆ ಸರಬರಾಜು ಆಗದಂತೆ ಎಚ್ಚರವಹಿಸಬೇಕು, ಅರಣ್ಯ ಪ್ರದೇಶದಲ್ಲಿನ ಕಾಲುದಾರಿಗಳ ಮೂಲಕ ಸಹ ಮಾದಕ ವಸ್ತುಗಳು ಜಿಲ್ಲೆಯೊಳಗೆ ಬರದಂತೆ ನೋಡಿಕೊಳ್ಳಬೇಕು ಮತ್ತು ಅರಣ್ಯದ ಒಳಭಾಗದಲ್ಲಿ ಮತ್ತು ಕೃಷಿ ಜಮೀನುಗಳ ಮಧ್ಯೆ ಗಾಂಜಾ ಬೆಳೆಯುವುದರ ಬಗ್ಗೆ ಅರಣ್ಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಪರಿಶೀಲಿಸಬೇಕು, ಅರಣ್ಯ ಚೆಕ್ ಪೋಸ್ಟ್‌ಗಳಲ್ಲಿ ಬಿಗು ತಪಾಸಣೆ ನಡೆಸಬೇಕು ಎಂದರು.

 ಮೆಡಿಕಲ್ ಶಾಪ್‌ಗಳಲ್ಲಿ ವೈದ್ಯರ ಅನುಮತಿ ಇಲ್ಲದೇ ಔಷಧಗಳನ್ನು ನೀಡುವವರ ವಿರುದ್ಧ ನಿಗಾ ವಹಿಸುವಂತೆ ಮತ್ತು ನಿಷೇದಿತ ಔಷದ ಹಾಗೂ ಮಾತ್ರೆಗಳ ಸರಬರಾಜು ಮತ್ತು ದಾಸ್ತಾನು ಬಗ್ಗೆ ನಿರಂತರವಾಗಿ ಪರಿಶೀಲಿಸಿ, ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಔಷಧ ನಿಯಂತ್ರಣಾಧಿಕಾರಿಗಳಿಗೆ ಸೂಚನೆ ನೀಡಿದರು.

ಆರೋಗ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆವತಿಯಿಂದ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ ವ್ಯಾಪಕ ಅರಿವು ಮೂಡಿಸುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರನ್ನು ಒಳಗೊಂಡ ಜಾಗೃತಿ ಜಾಥಾ ಕಾರ್ಯಕ್ರಮಗಳನ್ನು ನಡೆಸುವಂತೆ ನಿರ್ದೇಶನ ನೀಡಿದರು.

300x250 AD

ಜಿಲ್ಲೆಯಲ್ಲಿನ ಮಾದಕ ವ್ಯಸನಿಗಳನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಅವರನ್ನು ಮನ:ಪರಿವರ್ತನೆ ಮಾಡುವ ವ್ಯಸನಮುಕ್ತ ಕೇಂದ್ರಗಳನ್ನು ಗುರುತಿಸುವಂತೆ ಹಾಗೂ ಜಿಲ್ಲೆಯ ಎಲ್ಲಾ ತಾಲೂಕು ಆರೋಗ್ಯ ಕೇಂದ್ರಗಳಲ್ಲಿ ಮಾದಕ ವಸ್ತು ಸೇವನೆ ಬಗ್ಗೆ ಪರಿಶೀಲಿಸಲು ಇರುವ ಕಿಟ್‌ಗಳು ಕೊರತೆಯಾಗದಂತೆ ನೋಡಿಕೊಳ್ಳಿ, ಆಶಾ ಮತು ಅಂಗನವಾಡಿ ಕಾರ್ಯಕರ್ತರಿಗೆ ಅಗತ್ಯ ತರಬೇತಿ ನೀಡಿ, ಹದಿ ಹರೆಯದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾದಕ ವಸ್ತುಗಳಿಗೆ ಬಲಿಯಾಗುತ್ತಿದ್ದು ಈ ಬಗ್ಗೆ ಎಚ್ಚರವಹಿಸಿ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ್ ಮಾತನಾಡಿ, ಜಿಲ್ಲೆಯಲ್ಲಿ ಮಾದಕ ವಸ್ತು ನಿಯಂತ್ರಣ ಕುರಿತಂತೆ ಪೊಲೀಸ್ ಇಲಾಖೆ ವತಿಯಿಂದ ವ್ಯಾಪಕ ರೀತಿಯಲ್ಲಿ ಜಾಗೃತಿ ಮತ್ತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತಿದೆ. ಜಿಲ್ಲೆಯ ಎಲ್ಲಾ ಚೆಕ್ ಪೋಸ್ಟ್ಗಳಲ್ಲಿ ಸಿಸಿಟಿವಿ ಅಳವಡಿಸಬೇಕು ಮತ್ತು ಬಂದರು ಮೂಲಕ ಆಗಮಿಸುವವರ ಕುರಿತು ಮತ್ತು ಬೋಟ್‌ಗಳಲ್ಲಿ ವ್ಯಾಪಕ ತಪಾಸಣೆ ನಡೆಯಬೇಕು. ಅಂಚೆ ಕಚೇರಿಗೆ ಬರುವ ಪಾರ್ಸೆಲ್‌ಗಳನ್ನು ತಪಾಸಣೆ ನಡೆಸಬೇಕು. ಜಿಲ್ಲೆಯಲ್ಲಿ ಮಾದಕ ವಸ್ತು ಸೇವನೆ ಮಾಡುವವರು ಮತ್ತು ಸರಬರಾಜು ಮಾಡುವವರ ಮಾಹಿತಿಯಿದ್ದಲ್ಲಿ ಸಾರ್ವಜನಿಕರು ಪೊಲೀಸ್ ಇಲಾಖೆಯ ತುರ್ತು ಉಚಿತ ಸಹಾಯವಾಣಿ ಸಂಖ್ಯೆ 112 ಗೆ ತಿಳಿಸಬೇಕು. ಮಾದಕ ವಸ್ತುಗಳ ಕುರಿತ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಪೊಲೀಸ್ ಇಲಾಖೆ ವತಿಯಿಂದ ಜಿಲ್ಲೆಯಾದ್ಯಂತ ವಾಕ್‌ಥಾನ್ ಮತ್ತು ಮ್ಯಾರಾಥಾನ್ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಕನಿಷ್ಕ ಸೇರಿದಂತೆ ಜಿಲ್ಲಾ ಎನ್ಕಾರ್ಡ್ ಸಮಿತಿಯಲ್ಲಿನ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top