ಸಿದ್ದಾಪುರ: ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಮಂಗಳವಾರ ಸಿದ್ದಾಪುರ ತಾಲೂಕಿನ ಬೇಡ್ಕಣಿ ಹಾಗೂ ಹಾರ್ಸಿಕಟ್ಟಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಿವಿಧೆಡೆ 2 ಕೋಟಿ ವೆಚ್ಚದಲ್ಲಿ ನಡೆಯುವ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
ಬೇಡ್ಕಣಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೇಡ್ಕಣಿ ಶನೇಶ್ವರ ದೇವಸ್ಥಾನದ ಎದುರಿನ ರಸ್ತೆ ಹಾಗೂ ಶನೇಶ್ವರ ದೇವಾಲಯದ ಹಿಂಬದಿಯ ಗುಂಜಗೋಡ ರಸ್ತೆ ನಿರ್ಮಾಣ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಿದರು. ನಂತರ ಕಡಕೇರಿಯ ಈಶ್ವರ ದೇವಸ್ಥಾನದ ಹಿಂಬದಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿದರು.
ತಾಲೂಕಿನ ಹಾರ್ಸಿಕಟ್ಟಾ ಗ್ರಾಪಂ ವ್ಯಾಪ್ತಿಯ ವಾಜಗದ್ದೆ-ಮತ್ತಿಗಾರ ರಸ್ತೆ, ಭಂಡಾರಕೇರಿ ಮುಖ್ಯ ರಸ್ತೆಯಿಂದ ಕಲ್ಮನೆ ರಸ್ತೆ, ಮಾವಿನಗಟ್ಟ ಏರಿಯಿಂದ ಕೋಡ್ಸರ ಸಹಿಪ್ರಾ ಶಾಲೆ ರಸ್ತೆ, ಸಹಿಪ್ರಾ ಶಾಲೆ ಹಾರ್ಸಿಕಟ್ಟಾದಿಂದ ಈಶ್ವರ ದೇವಸ್ಥಾನದ ರಸ್ತೆ, ಉಯ್ಯಾಲೆಮನೆ ರಸ್ತೆ ಹಾಗೂ ಮುಟ್ಟಳ್ಳಿ, ಓಣಿತೋಟ ಹಾಗೂ ಗಾಳಿಜಿಡ್ಡಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
ಈ ವೇಳೆ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ರಸ್ತೆಗಳ ಸುಧಾರಣೆಗಾಗಿ ಈಗಾಗಲೇ ಸರ್ಕಾರದಿಂದ ಸಾಕಷ್ಟು ಅನುದಾನ ಮಂಜೂರಾಗಿ ಕಾಮಗಾರಿ ಪ್ರಾರಂಭವಾಗಿವೆ. ನಾನು ಕೇವಲ ಭರವಸೆ ನೀಡುವ ಶಾಸಕನಲ್ಲ. ಕೃತಿಯ ಮೂಲಕ ಮಾಡುವ ಜನಪ್ರತಿನಿಧಿ. ಕ್ಷೇತ್ರದ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇನೆ. ಶಿಕ್ಷಣ ಹಾಗೂ ಕುಡಿಯುವ ನೀರಿಗೆ ಪ್ರಾಶಸ್ತ್ಯ ನೀಡುತ್ತಿದ್ದು, ಈಗಾಗಲೇ ಅನೇಕ ಶಾಲೆಗಳ ಕೊಠಡಿ ನಿರ್ಮಣ ಹಾಗೂ ದುರಸ್ಥಿಗೆ ಅನುದಾನ ನೀಡಲಾಗಿದೆ. ಕ್ಷೇತ್ರದ ಯಾವ ಊರಲ್ಲೂ ಕುಡಿಯುವ ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವಂತೆ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಬೇಡ್ಕಣಿ ಹಾಗೂ ಹಾರ್ಸಿಕಟ್ಟಾ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಸದಸ್ಯರು, ಪಿಡಿಓ, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಹಾಜರಿದ್ದರು.